ಮೂಲಕ: ವಿವೇಕ್ ಜೆ
ಜನವರಿ 13 2023
ವೀಡಿಯೋದಲ್ಲಿರುವ ವ್ಯಕ್ತಿ ಮುಸ್ಲಿಂ ಅಲ್ಲ. ಈ ವೀಡಿಯೋವನ್ನು ಕೋಮು ದೃಷ್ಟಿಕೋನದೊಂದಿಗೆ ಹಂಚಿಕೊಳ್ಳಲಾಗಿದೆ.
ಸಂದರ್ಭ
ಹಿಂದೂ ದೇವತೆ ಸರಸ್ವತಿಯ ಫೋಟೋವನ್ನು ವ್ಯಕ್ತಿಯೊಬ್ಬ ಒದೆಯುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಹಂಚಿಕೊಳ್ಳಲಾಗಿದೆ. ಕನ್ನಡದಲ್ಲಿ ಬರೆದಿರುವ ವೀಡಿಯೋದ ಶೀರ್ಷಿಕೆಯು ಹೇಳುವುದೇನೆಂದರೆ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯು ಮುಸ್ಲಿಂ ಆಗಿದ್ದು ದೇವಿಯ ಫೋಟೋವನ್ನು ಒದೆಯುವ ಮೂಲಕ ಹಿಂದೂ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು. ಅಂತಹ ಒಂದು ಶೀರ್ಷಿಕೆಯು, "ನಮ್ಮ ಸರಸ್ವತಿ ದೇವಿಯ ಫೋಟೋವನ್ನು ಒದೆದ ಈ ಜಿಹಾದಿಯನ್ನು ಸುಮ್ಮನೆ ಬಿಡಬೇಡಿ" ಎಂದು ಹೇಳುತ್ತದೆ.
ಹಲವಾರು ಸಾಮಾಜಿಕ ಜಾಲತಾಣದ ಬಳಕೆದಾರರು ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಿಗೆ ಅಗೌರವ ತೋರಿದ್ದಾರೆ ಎಂದು ಹೇಳುವ ಮೂಲಕ ಈ ವೀಡಿಯೋವನ್ನು ವಿವಿಧ ಭಾಷೆಗಳಲ್ಲಿನ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ.
ವಾಸ್ತವವಾಗಿ
ಈ ವೀಡಿಯೋದ ಮೂಲವು ಎಬಿಪಿ ನ್ಯೂಸ್ ಗುಜರಾತಿಯ ಒಂದು ಕ್ಲಿಪ್ ಎಂದು ಕಂಡುಬಂದಿದೆ. ಈ ವೀಡಿಯೋದ ಶೀರ್ಷಿಕೆ ಹೀಗಿದೆ "ಛೋಟಾಉದೇಪುರ್: ಕುಡಿದ ಅಮಲಿನಲ್ಲಿ ಪ್ರವಾಸಿ ಶಿಕ್ಷಕರೊಬ್ಬರು ಸರಸ್ವತಿ ಮಾತೆಯ ಫೋಟೋಗೆ ಒದೆದರು." ವರದಿಯ ಪ್ರಕಾರ, ಶಿಕ್ಷಕನ ಹೆಸರು ಯೋಗೇಶ್ ರಾಥ್ವಾ, ಹಾಗು ಡಿಸೆಂಬರ್ ೨೮, ೨೦೨೨ ರಂದು ಗುಜರಾತ್‌ನ ಛೋಟಾಉದೇಪುರ್ ಜಿಲ್ಲೆಯ ಕಾವಂತ್ ತಾಲೂಕಿನಲ್ಲಿ ಈ ಘಟನೆ ಸಂಭವಿಸಿದೆ.
ಆ ಪ್ರದೇಶದ ಶಾಲೆಯೊಂದಕ್ಕೆ ಭೇಟಿ ನೀಡುತ್ತಿದ್ದ ರಾಥ್ವಾ ಕುಡಿದು ತನ್ನ ಸಹ ಶಿಕ್ಷಕರನ್ನು ನಿಂದಿಸುತ್ತಿದ್ದ ಎಂದು ಆಜ್ ತಕ್ ಸುದ್ದಿ ವರದಿ ತಿಳಿಸಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಥ್ವಾರನ್ನು ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಮದ್ಯದ ಮಾರಾಟ, ಕೈವಶ ಇಟ್ಟುಕೊಳ್ಳುವುದು ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಸಂದರ್ಶಕರಿಗೆ ಮತ್ತು ಆರೋಗ್ಯದ ಕಾರಣಗಳಿಗಾಗಿ ಕೆಲವು ವಿನಾಯಿತಿಗಳನ್ನು ಮದ್ಯ ಸೇವನೆ ಹಾಗು ಮಾರಾಟದ ವಿಷಯದಲ್ಲಿ ಮಾಡಲಾಗಿದೆ. ದಿ ಕ್ವಿಂಟ್ ಈ ಘಟನೆಯ ಎಫ್‌ಐಆರ್ ಅನ್ನು ಉಲ್ಲೇಖಿಸಿ ಸುದ್ದಿ ವರದಿಯೊಂದನ್ನು ಪ್ರಕಟಿಸಿದೆ. ರಾಥ್ವಾ ಅವರು ಮದ್ಯಪಾನ ಮಾಡಲು ಪರವಾನಿಗೆ ಹೊಂದಿಲ್ಲ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ, ಆದ್ದರಿಂದ ಅವರನ್ನು ಗುಜರಾತ್ ನಿಷೇಧ ಕಾಯ್ದೆಯ ಸೆಕ್ಷನ್ ೬೬(೧) ಬಿ ಪ್ರಕಾರ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ರಾಥ್ವಾ ದೇವಿಯ ಫೋಟೋವನ್ನು ಒದೆಯುವುದನ್ನು ಉಲ್ಲೇಖಿಸಿಲ್ಲ ಎಂದು ಕ್ವಿಂಟ್ ಹೇಳಿದೆ. ಕ್ವಿಂಟ್ ನೊಂದಿಗೆ ಮಾತನಾಡಿದ ಛೋಟಾಉದೇಪುರ್ ಎಸ್.ಪಿ. ಧರ್ಮೇಂದ್ರ ಶರ್ಮಾ ಅವರು ರಾಥ್ವಾ ಓರ್ವ ಹಿಂದೂ, ಸಾಮಾಜಿಕ ಜಾಲತಾಣಗಳಲ್ಲಿ ಜನ ಹೇಳಿಕೊಂಡಿರುವಂತೆ ಮುಸ್ಲಿಂ ಅಲ್ಲ ಎಂದು ದೃಢಪಡಿಸಿದ್ದಾರೆ.
ತೀರ್ಪು
ಮದ್ಯದ ಅಮಲಿನಲ್ಲಿ ಯೋಗೇಶ್ ರಾಥ್ವಾ ಎಂಬ ಶಿಕ್ಷಕ ಹಿಂದೂ ದೇವತೆ ಸರಸ್ವತಿಯ ಫೋಟೋವನ್ನು ಒದೆಯುವ ವೀಡಿಯೋವನ್ನು ಕೋಮು ದೃಷ್ಟಿಕೋನದೊಂದಿಗೆ ಹಂಚಿಕೊಳ್ಳಲಾಗಿದೆ. ಈತನು ಒಬ್ಬ ಹಿಂದೂ. ಸಾಮಾಜಿಕ ಜಾಲತಾಣದ ಬಳಕೆದಾರರು ಹೇಳಿಕೊಳ್ಳುವಂತೆ ಈ ವ್ಯಕ್ತಿ ಒಬ್ಬ ಮುಸ್ಲಿಂ ಸಮುದಾಯದವನಲ್ಲ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.