ಮೂಲಕ: ಅಂಕಿತಾ ಕುಲಕರ್ಣಿ
ನವೆಂಬರ್ 25 2022
ವೈರಲ್ ಆಗಿರುವ ವಿಡಿಯೋ 'ಹೊಯ್ಸಳ' ಎಂಬ ಮುಂಬರುವ ಕನ್ನಡ ಚಲನಚಿತ್ರದ ಶೂಟಿಂಗ್ ತುಣುಕು. ಇದನ್ನು ನೈಜ ಘಟನೆ ಎಂದು ತಪ್ಪಾಗಿ ಗ್ರಹಿಸಲಾಗಿದೆ.
ಸಂದರ್ಭ
ಬೆಳಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ಯುವಕನನ್ನು ಪೊಲೀಸ್ ಅಧಿಕಾರಿಯು ಕಾಲಿನಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋ ಕುರಿತು, ಪೋಲೀಸರ ದುರ್ವರ್ತನೆಯನ್ನು ಖಂಡಿಸುತ್ತಾ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಆದರೆ ವೈರಲ್ ಆದ ವಿಡಿಯೋ ನಕಲಿಯಾಗಿದ್ದು ಮತ್ತು ಇದು ಸಿನಿಮಾ ಚಿತ್ರೀಕರಣದ ತುಣುಕು ಎಂದು ರಾಜ್ಯ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ವಾಸ್ತವವಾಗಿ
ಈ ಕಥೆಗೆ ಸಂಬಂಧಿಸಿದ ಹಲವು ಕೀವರ್ಡ್ಗಳನ್ನು(ಬೆಳಗಾವಿ ಪೊಲೀಸ್, ಚೆನ್ನಮ್ಮ ಸರ್ಕಲ್,ಒದೆಯುವ) ಉಪಯೋಗಿಸಿಕೊಂಡು ಸತ್ಯ ಪರಿಶೀಲನೆ ಮಾಡಿದಾಗ ನಮಗೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಪ್ರಕಟಿಸಿದ ಫ್ಯಾಕ್ಟ್ ಚೆಕ್ ಕಂಡುಬಂದಿದೆ. ಈ ಪ್ರಕಟಣೆಯು, ವೈರಲ್ ವೀಡಿಯೋದಲ್ಲಿ ಕಂಡುಬಂದಂತಹ ದೃಶ್ಯಗಳು ಅಸಲಿ ಅಲ್ಲ. ಇದು "ಚಲನಚಿತ್ರದ ಸೀನ್ನನ್ನು ಚಿತ್ರೀಕರಿಸಿದ ಸಮಯದಲ್ಲಿ ತೆಗೆದ ದೃಶ್ಯಾವಳಿಯಾಗಿದೆ. ಇದನ್ನು ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ." ಎಂದು ವಿವರಿಸುತ್ತದೆ. ಈ ಚಲನಚಿತ್ರದ ತುಣುಕನ್ನು ತಪ್ಪಾಗಿ ಅರ್ಥೈಸಿಕೊಂಡು ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಮೇಲೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ವೀಡಿಯೋವನ್ನು ಮತ್ತೆ ಹಂಚಿಕೊಳ್ಳದಂತೆ ಜನರಲ್ಲಿ ವಿನಂತಿಸಿದ್ದಾರೆ.
ಬೆಳಗಾವಿ ನಗರದ ಪೊಲೀಸರು ಕೂಡ ಈ ಬಗೆಗೆ ಸ್ಪಷ್ಟತೆಯನ್ನು ನೀಡಿದ್ದಾರೆ. ಅವರ ಅಫೀಷಿಯಲ್ ಟ್ವಿಟ್ಟರ್ ಖಾತೆ ಇಂದ ಪೋಷ್ಟ್ ಮಾಡಿದ ಸುತ್ತೋಲೆಯ ಪ್ರಕಾರ ವೈರಲ್ ಆದ ವಿಡಿಯೋ ಅಸಲಿ ಅಲ್ಲ ಹಾಗು ನಗರದಲ್ಲಿ ಅಂತಹ ಯಾವುದೇ ನೈಜ ಘಟನೆಗಳು ವರದಿಯಾಗಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದಲ್ಲದೆ, ಈ ವೈರಲ್ ವಿಡಿಯೋ ನವೆಂಬರ್ ೧೯, ೨೦೨೨ ರಂದು ಎಸ್ ವಿ ಏನ್ (SVN) ಅನ್ನೋ ಯೂಟ್ಯೂಬ್ (YouTube) ಚಾನೆಲ್ ನಲ್ಲೂ ಸಹ ಪೋಷ್ಟ್ ಮಾಡಲಾಗಿದೆ, ಇದರ ಶೀರ್ಷಿಕೆ, "ಬೆಳಗಾವಿಯಲ್ಲಿ ಡಾಲಿ ಧನಂಜಯ ಹೊಯ್ಸಳ ಶೂಟಿಂಗ್" ಎಂದು ಬರೆಯಲಾಗಿದೆ.
ಜುಲೈ ೫, ೨೦೨೨ ರಂದು ಟೈಮ್ಸ್ ಆಫ್ ಇಂಡಿಯಾದ(TOI) ವರದಿಯು ಮುಂಬರುವ ಚಲನಚಿತ್ರ "ಹೊಯ್ಸಳ" ದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಧನಂಜಯ ಅವರೊಂದಿಗೆ ವಿಶೇಷ ಸಂದರ್ಶನವನ್ನು ಒಳಗೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಚಿತ್ರವು ಸಂಪೂರ್ಣವಾಗಿ ನನ್ನ ಪಾತ್ರವಾದ ಗುರುದೇವ ಹೊಯ್ಸಳವನ್ನು ಆಧರಿಸಿದೆ. ಚಿತ್ರವು ಹೆಚ್ಚಾಗಿ ಬೆಳಗಾವಿಯಲ್ಲಿ ಸೆಟ್ ಮಾಡಲಾಗಿದೆ" ಎಂದು ಹೇಳಿದರು. ಹಾಗೆಯೇ ನವೆಂಬರ್ ೨೦೨೨ ರ ಆರಂಭದಲ್ಲಿ ಪೋಷ್ಟ್ ಆದ ಹಲವು ಯೂಟ್ಯೂಬ್ ವೀಡಿಯೋಗಳಲ್ಲಿ ಬೆಳಗಾವಿ ನಗರದ ಜನರು ನಟನನ್ನು ಸ್ವಾಗತಿಸುತ್ತಿರುವ ದೃಶ್ಯಗಳನ್ನು ಕಾಣಬಹುದು. ಈ ನಿದರ್ಶನಗಳು ನಗರದಲ್ಲಿ ಶೂಟಿಂಗ್ ನಿಜವಾಗಿಯೂ ನಡೆಯುತ್ತಿದೆ ಮತ್ತು ವೈರಲ್ ಆಗಿರುವ ವೀಡಿಯೋ ನೈಜ ಘಟನೆಯದ್ದಲ್ಲ ಎಂದು ಸ್ಪಷ್ಟಪಡಿಸುತ್ತದೆ.
ತೀರ್ಪು
ಸಿನಿಮಾ ಶೂಟಿಂಗ್ ಕ್ಲಿಪ್ ಅನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇದನ್ನು ಸ್ಪಷ್ಠಪಡಿಸಿದ್ದು, ಈ ವೈರಲ್ ತುಣುಕು ತಪ್ಪು ಸುದ್ದಿಯನ್ನು ಹರಡುತ್ತಿದೆ ಎಂದು ಸೂಚಿಸಲಾಗಿದೆ.