ಮೂಲಕ: ವಿವೇಕ್ ಜೆ
ಜನವರಿ 20 2023
ತೆಲಂಗಾಣದ ಹೆಟೆರೋ ಫಾರ್ಮಾಸ್ಯುಟಿಕಲ್ಸ್‌ನಲ್ಲಿ ಚಿರತೆಯೊಂದು ನುಗ್ಗಿದಾಗ ಚಿತ್ರೀಕರಿಸಿದ ವೀಡಿಯೋವನ್ನು ಮೈಸೂರಿನ ಸಿಎಫ್‌ಟಿಆರ್‌ಐ ಅಂಗಣದಲ್ಲಿ ನಡೆದ ಘಟನೆ ಎಂದು ಹಂಚಿಕೊಳ್ಳಲಾಗಿದೆ.
ಸಂದರ್ಭ
ಜನವರಿ ೨೦೨೩ ರ ಮೊದಲ ವಾರದಲ್ಲಿ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಕ್ಯಾಂಪಸ್‌ನಲ್ಲಿ ಮತ್ತು ಅದರ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವ ಕುರಿತು ಹಲವಾರು ವರದಿಗಳು ಬಂದಿವೆ.
ಈ ಮಧ್ಯೆ, ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ-ಸಿಎಫ್‌ಟಿಆರ್‌ಐ (CFTRI) ಕಟ್ಟಡದೊಳಗೆ ಚಿರತೆಯೊಂದು ತಿರುಗಾಡುತ್ತಿದೆ ಎನ್ನಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವೀಡಿಯೋವನ್ನು ತಪ್ಪು ಶೀರ್ಷಿಕೆಯಂದಿಗೆ ಪ್ರಚರಿಸಲಾಗಿದೆ.
ವಾಸ್ತವವಾಗಿ
ಈ ವೀಡಿಯೋವಿನ ಕೀಫ್ರೇಮ್‌ಗಳನ್ನು ಪರಿಶೀಲಿಸಿದಾಗ, ಕಟ್ಟಡದೊಳಗೆ ಕಂಡುಬಂದ ಚಿರತೆಯ ವೀಡಿಯೋ ತೆಲಂಗಾಣದಲ್ಲಿ ನಡೆದ ಘಟನೆಯದ್ದು ಎಂದು ತಿಳಿದುಬಂದಿದೆ. ಡಿಸೆಂಬರ್ ೧೭, ೨೦೨೨ ರಂದು ಯೂಟ್ಯೂಬ್ ನಲ್ಲಿ ಹಂಚಿಕೊಂಡ TV9 ತೆಲುಗು ಸುದ್ದಿ ವರದಿಯು ಅದೇ ವೀಡಿಯೋವನ್ನು ತೋರಿಸಿದೆ ಮತ್ತು ಈ ಘಟನೆಯು ತೆಲಂಗಾಣದ ಹೆಟೆರೊ ಫಾರ್ಮಾಸ್ಯುಟಿಕಲ್ಸ್ ನ ಅಂಗಳದಲ್ಲಿ ನಡೆದಿದೆ ಎಂದು ವರದಿ ಮಾಡಿದೆ.
ಈಟಿವಿ ತೆಲಂಗಾಣ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೀಡಿಯೋ ಬಗ್ಗೆ ವರದಿಯನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಡೆಕ್ಕನ್ ಕ್ರಾನಿಕಲ್ ನ ವರದಿಯು ಈ ಘಟನೆಯು ಡಿಸೆಂಬರ್ ೨೦೨೨ ರಲ್ಲಿ ತೆಲಂಗಾಣದ ಗಡ್ಡಪೋಥರಂ ಕೈಗಾರಿಕಾ ಪ್ರದೇಶದಲ್ಲಿನ ಹೆಟೆರೊ ಫಾರ್ಮಾಸ್ಯುಟಿಕಲ್ಸ್‌ನ ಉತ್ಪಾದನಾ ಘಟಕದಲ್ಲಿ ಸಂಭವಿಸಿದೆ ಎಂದು ಹೇಳಿದೆ. ಚಿರತೆಯನ್ನು ಟ್ರ್ಯಾಂಕ್ವಿಲೈಜರ್ ಬಳಸಿ ಬಂಧಿಸಿದ ಅರಣ್ಯ ಸಿಬ್ಬಂಧಿಗಳು ಅದನ್ನು ತಾತ್ಕಾಲಿಕವಾಗಿ ರಾಜ್ಯದಲ್ಲಿನ ನೆಹರು ಮೃಗಾಲಯಕ್ಕೆ ಸ್ಥಳಾಂತರ ಮಾಡಿದರು ಎಂದು ಹೇಳಿದೆ.
ಹೆಟೆರೊ ಫಾರ್ಮಾದ ನೌಕರರು ಚಿರತೆಯ ವೀಡಿಯೋವನ್ನು ಕಳುಹಿಸಿ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಲಾಗಿದ್ದು, ತಕ್ಷಣವೇ ಆ ಚಿರತೆಯನ್ನು ಹಿಡಿಯಲು ತಂಡವೊಂದನ್ನು ಕಳುಹಿಸಲಾಯಿತು ಎಂದು ಜಿಲ್ಲಾ ಅರಣ್ಯಾಧಿಕಾರಿ (ಡಿಎಫ್‌ಒ) ಶ್ರೀಧರ್ ರಾವ್ ಡೆಕ್ಕನ್ ಕ್ರಾನಿಕಲ್‌ಗೆ ತಿಳಿಸಿದ್ದಾರೆ.
ಹೀಗಾಗಿ ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿನದ್ದು ಎಂದು ಪ್ರಚಾರ ಮಾಡಲಾಗಿರುವ ವೀಡಿಯೋ ಕನಿಷ್ಠ ಮೂರು ವಾರ ಹಳೆಯದ್ದು ಎಂದು ನಿಸ್ಸಂದೇಹವಾಗಿ ಹೇಳಬಹುದು.
ಹೀಗಿರುವಾಗ ಸ್ಟಾರ್ ಆಫ್ ಮೈಸೂರ್ ನಲ್ಲಿ ಜನವರಿ ೩, ೨೦೨೩ ರಂದು ಪ್ರಕಟವಾದ ವರದಿಯು ಸಿಎಫ್‌ಟಿಆರ್‌ಐ ಕ್ಯಾಂಪಸ್‌ನಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಎರಡು ಚಿರತೆಗಳನ್ನು ಕಂಡರೆಂಬ ಹಿನ್ನಲೆಯಲ್ಲಿ ಸಿಎಫ್‌ಟಿಆರ್‌ಐ ನಿರ್ದೇಶಕರು ಈ ವಿಷಯದ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಎಂದು ವರದಿ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿ, ಕ್ಯಾಂಪಸ್‌ನಲ್ಲಿ ಹಲವು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಮ್ಮೊಂದಿಗೆ ಮಾತನಾಡಿದ ಮೈಸೂರಿನ ಅರಣ್ಯ ಇಲಾಖೆಯ ಆಫೀಸರ್ ಕೆ ಸುರೇಂದ್ರ ಅವರು, ಜನವರಿ ೩ ರ ರಾತ್ರಿ ಸೆಕ್ಯೂರಿಟಿ ಗಾರ್ಡ್ ಚಿರತೆಯನ್ನು ಕಂಡರೆಂದು ಹೇಳಿದ ಸ್ಥಳದಲ್ಲಿ ಚಿರತೆಯ ಯಾವುದೇ ಪಗ್ ಮಾರ್ಕ್ ಕಂಡುಬಂದಿಲ್ಲ ಎಂದರು. ಅರಣ್ಯ ಇಲಾಖೆ ಅಳವಡಿಸಿರುವ ಸಿಸಿಟಿವಿ ಸೇರಿದಂತೆ ಸುತ್ತಮುತ್ತಲಿನ ಯಾವುದೇ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಕಾಣಿಸಿಕೊಂಡಿಲ್ಲ ಎಂದು ಅವರು ಹೇಳಿದರು. ಜನವರಿ ೨೦೨೩ ರಲ್ಲಿ ಸಿಎಫ್‌ಟಿಆರ್‌ಐ ಕ್ಯಾಂಪಸ್ ಬಳಿ ಚಿತ್ರೀಕರಿಸಲಾದ ಯಾವುದೇ ವೀಡಿಯೋ ಅವರ ಗಮನಕ್ಕೆ ಬಂದಿಲ್ಲ ಎಂದು ಕೂಡ ಅವರು ದೃಢಪಡಿಸಿದರು.
ತೀರ್ಪು
ಡಿಸೆಂಬರ್ ೨೦೨೨ ರಲ್ಲಿ ತೆಲಂಗಾಣದ ಹೆಟೆರೊ ಫಾರ್ಮಾಸ್ಯುಟಿಕಲ್ಸ್ ಉತ್ಪಾದನಾ ಘಟಕದೊಳಗೆ ಚಿರತೆಯೊಂದು ತಿರುಗಾಡುತ್ತಿರುವ ವೀಡಿಯೋವನ್ನು ಕರ್ನಾಟಕದ ಮೈಸೂರಿನಲ್ಲಿರುವ ಸಿಎಫ್‌ಟಿಆರ್‌ಐ ಅಂಗಣದಲ್ಲಿ ಚಿರತೆ ಪ್ರವೇಶಿಸಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.