ಮುಖಪುಟ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ತ್ರಿವರ್ಣ ಧ್ವಜದ ಮೇಲೆ ಇಸ್ಲಾಮಿಕ್ ಪಠ್ಯವನ್ನು ಬರೆಯಲಾಗಿದೆ ಎಂದು ಹೇಳಲು ೨೦೨೨ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ತ್ರಿವರ್ಣ ಧ್ವಜದ ಮೇಲೆ ಇಸ್ಲಾಮಿಕ್ ಪಠ್ಯವನ್ನು ಬರೆಯಲಾಗಿದೆ ಎಂದು ಹೇಳಲು ೨೦೨೨ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ಡಿಸೆಂಬರ್ 11 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ತ್ರಿವರ್ಣ ಧ್ವಜದ ಮೇಲೆ ಇಸ್ಲಾಮಿಕ್ ಪಠ್ಯವನ್ನು ಬರೆಯಲಾಗಿದೆ ಎಂದು ಹೇಳಲು ೨೦೨೨ರ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ನಂತರ ಭಾರತದ ಧ್ವಜದ ಮೇಲೆ ಕಲ್ಮ ಎಂದು ಬರೆಯಲಾಗಿದೆ ಎಂದು ಹೇಳಿಕೊಂಡು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್‌/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ತೆಲಂಗಾಣದಲ್ಲಿ ಪ್ರತಿಭಟನಾಕಾರರು ಅಶೋಕ ಚಕ್ರದ ಬದಲಿಗೆ ಕಲ್ಮ ಎಂದು ಬರೆದ ರಾಷ್ಟ್ರಧ್ವಜವನ್ನು ಹಾರಿಸಿದ ಈ ವೀಡಿಯೋ ಜೂನ್ ೨೦೨೨ ರಲ್ಲಿ ಸೆರೆಹಿಡಿಯಲಾಗಿದೆ.

ಇಲ್ಲಿನ ಹೇಳಿಕೆ ಏನು?

ಕಳೆದ ವಾರ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ಐದು ರಾಜ್ಯಗಳಲ್ಲಿ ಒಂದಾದ ತೆಲಂಗಾಣದಲ್ಲಿ ವಿಜಯಶಾಲಿಯಾದ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದ ಅತ್ಯಂತ ಕಿರಿಯ ರಾಜ್ಯದಲ್ಲಿ ಸರ್ಕಾರವನ್ನು ರಚಿಸಲು ಸಿದ್ಧವಾಗಿದೆ. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ತಕ್ಷಣ, ಭಾರತೀಯ ಧ್ವಜದ ಮೇಲೆ ಕಲ್ಮಾವನ್ನು (ಮುಸ್ಲಿಮರು ಪಠಿಸುವ ಧಾರ್ಮಿಕ ನುಡಿಗಟ್ಟು) ಬರೆಯಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. 

೪೮ ಸೆಕೆಂಡ್‌ಗಳ ಈ ವೀಡಿಯೋ ಪ್ರತಿಭಟನಾಕಾರರ ಗುಂಪನ್ನು ತೋರಿಸುತ್ತದೆ ಮತ್ತು ಜನಸಮೂಹದಿಂದ ಯಾರೋ ಅಶೋಕ ಚಕ್ರದ ಸ್ಥಳದಲ್ಲಿ ಕಲ್ಮವನ್ನು ಬರೆದಿರುವ ಭಾರತೀಯ ಧ್ವಜವನ್ನು ಎತ್ತಿ ಹಿಡಿದಿರುವುದನ್ನು ತೋರುತ್ತಿದೆ. ಈ ವೀಡಿಯೋ ಹಿಂದಿ ಸುದ್ದಿ ವಾಹಿನಿ ಝೀ ನ್ಯೂಸ್‌ನ ಸುದ್ದಿ ವರದಿಯ ಭಾಗವಾಗಿದೆ ಮತ್ತು ಘಟನೆಯ ಕುರಿತು ಸುದ್ದಿ ನಿರೂಪಕ ಸುಧೀರ್ ಚೌಧರಿ ಪ್ರತಿಕ್ರಿಯಿಸುವುದನ್ನು ತೋರಿಸುತ್ತದೆ. ವೀಡಿಯೋದಲ್ಲಿ, ಚೌಧರಿ ಅವರು ಮಾತನಾಡುವುದನ್ನು ಕೇಳಬಹುದು, "...ಇಂದು, ತೆಲಂಗಾಣದಲ್ಲಿ ಅಂತಹ ಒಂದು ಮೆರವಣಿಗೆಯಲ್ಲಿ, ಪ್ರತಿಭಟನಾಕಾರರು ಭಾರತದ ತ್ರಿವರ್ಣ ಧ್ವಜವನ್ನು ಹಾಳುಮಾಡಿದರು ಮತ್ತು ಈ ಜನರು ತ್ರಿವರ್ಣ ಧ್ವಜದ ಮಧ್ಯದಿಂದ ಅಶೋಕ ಚಕ್ರವನ್ನು ತೆಗೆದು ಅಲ್ಲಿ ಇಸ್ಲಾಮಿಕ್ ಕಲ್ಮವನ್ನು ಹಾಕಿದರು, (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ಹೇಳುತ್ತಾರೆ.

ಈ ವೀಡಿಯೊವನ್ನು ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಅನೇಕ ಬಲಪಂಥೀಯ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ, ಮತ್ತು ಅದರ ಶೀರ್ಷಿಕೆ, "ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದ ತಕ್ಷಣ ಭಾರತದ ಧ್ವಜದ ಮೇಲೆ ಕಲ್ಮ ಎಂದು ಬರೆಯಲಾಗಿದೆ. ಹಿಂದೂಗಳೇ, ನೀವು ಇನ್ನೂ ಕಾಂಗ್ರೆಸ್ ಅನ್ನು ನಿಮ್ಮ ರಾಜ್ಯಕ್ಕೆ ಅಥವಾ ಕೇಂದ್ರಕ್ಕೆ ತರಲು ಬಯಸುತ್ತೀರಾ," ಎಂದು ಬರೆಯಲಾಗಿದೆ. ಅಂತಹ ಒಂದು ಪೋಷ್ಟ್, ಈ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸುವ ಸಮಯದಲ್ಲಿ ೧,೫೬,೦೦೦ ಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಪೋಷ್ಟ್ ಗಳ ಆರ್ಕೈವ್ ಲಿಂಕ್ ಗಳನ್ನೂ ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ ವೀಕ್ಷಿಸಬಹುದು.


ವೈರಲ್  ಎಕ್ಸ್‌ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್‌ಗಳು/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ತೆಲಂಗಾಣದಲ್ಲಿ ಪ್ರತಿಭಟನಾಕಾರರು ಅಶೋಕ ಚಕ್ರದ ಬದಲಿಗೆ ಇಸ್ಲಾಮಿಕ್ ಪಠ್ಯದೊಂದಿಗೆ ಧ್ವಜವನ್ನು ಹಾರಿಸಿದ ಈ ವೀಡಿಯೋ ಜೂನ್ ೨೦೨೨ ರದ್ದು, ಪ್ರವಾದಿ ಮೊಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ ಆಗಿನ ವಕ್ತಾರ ನೂಪುರ್ ಶರ್ಮಾ ಅವರು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಹಿನ್ನಲೆಯಲ್ಲಿ ಈ ವೀಡಿಯೋ ಸೆರೆಹಿಡಿಯಲಾಗಿದೆ. 

ವಾಸ್ತವಾಂಶಗಳು

ಇಲ್ಲಿ ಗಮನಿಸಬೇಕಾದ ಮೊದಲ ವಿಷಯವೆಂದರೆ ಸುಧೀರ್ ಚೌಧರಿ ಅವರು ಈಗ ಜೀ ನ್ಯೂಸ್‌ನಲ್ಲಿಲ್ಲ, ಅವರು ಜುಲೈ ೨೦೨೨ ರಲ್ಲಿ ಮತ್ತೊಂದು ಹಿಂದಿ ಸುದ್ದಿ ವಾಹಿನಿಯಾದ ಆಜ್ ತಕ್‌ಗೆ ಸೇರಿದ್ದಾರೆ.  

ಎರಡನೆಯದಾಗಿ, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೋದ ದೀರ್ಘ ಆವೃತ್ತಿಯನ್ನು ಹುಡುಕಿದಾಗ, ಕ್ಲಿಪ್ ಚೌಧರಿ ಅವರು ಈ ಹಿಂದೆ ಹೋಸ್ಟ್ ಮಾಡಿದ ಝೀ ನ್ಯೂಸ್ ಶೋ 'ಡಿಎನ್‌ಎ' ನಿಂದ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದಿದೆ. ವಿಸ್ತೃತ ಕ್ಲಿಪ್ ಅನ್ನು ಜೂನ್ ೧೦, ೨೦೨೨ ರಂದು ಝೀ ನ್ಯೂಸ್ ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದು, ಈ ವೈರಲ್ ವೀಡಿಯೋ ಇತ್ತೀಚೆಗೆ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಗೆ ಸಂಬಂಧಿಸಿಲ್ಲ ಮತ್ತು ಒಂದು ವರ್ಷಕ್ಕಿಂತ ಹಳೆಯದ್ದು ಎಂದು ದೃಢಪಡಿಸುತ್ತದೆ.

ಕಾರ್ಯಕ್ರಮದಲ್ಲಿ, ಪ್ರವಾದಿ ಮುಹಮ್ಮದ್ ವಿರುದ್ಧ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರು ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳಾದ ವಿಷಯವನ್ನು ಚೌಧರಿ ಅವರು 'ವಿಶ್ಲೇಷಿಸಿದ್ದರು'. ವೈರಲ್ ಕ್ಲಿಪ್ ಝೀ ನ್ಯೂಸ್ ವೀಡಿಯೋದ ೩೩:೧೪ ನಿಮಿಷಗಳ ಮಾರ್ಕ್‌ನಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿ, ಹಿಂಸಾಚಾರದಲ್ಲಿ ಅಸಾದುದ್ದೀನ್ ಓವೈಸಿಯವರ ಪಕ್ಷವಾದ  ಎಐಎಂಐಎಂ ನ ಪಾತ್ರವನ್ನು ಚೌಧರಿ ಅವರು ಉಲ್ಲೇಖಿಸಿದ್ದಾರೆ ಮತ್ತು ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಡೆದ ಪ್ರತಿಭಟನೆಗಳ ಬಗ್ಗೆ ಮಾತನಾಡಿದ್ದಾರೆ. 

ಇದರ ನಂತರ, "ಇಂದು ತೆಲಂಗಾಣದಲ್ಲಿ ಅಂತಹ ರೀತಿಯ ಮೆರವಣಿಗೆಗಳು.." ಎಂದು ಚೌಧರಿ ಅವರು ಹೇಳಿದಾಗ, ಜೂನ್ ೧೦, ೨೦೨೨ ರಂದು ತೆಲಂಗಾಣದ ಮಹಬೂಬ್‌ನಗರದ ಸಭೆಯಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ದೇಶದ ಧ್ವಜದ ಮೇಲೆ ಭಾರತದ ರಾಷ್ಟ್ರೀಯ ಲಾಂಛನವಾದ ಅಶೋಕ ಚಕ್ರದ ಬದಲಿಗೆ ಕಲ್ಮವನ್ನು ಬರೆದಿದ್ದರು ಎಂದು ಹೇಳುತ್ತಾರೆ. 

ಯಾರೋ ಒಬ್ಬರು ರಾಷ್ಟ್ರೀಯ ಲಾಂಛನದ ಬದಲಿಗೆ ಕಲ್ಮದೊಂದಿಗೆ ಭಾರತದ ಧ್ವಜವನ್ನು ಹಾರಿಸಿದ ವೀಡಿಯೋವನ್ನು ಇಂಡಿಯಾ ಟುಡೇ, ಟೈಮ್ಸ್ ನೌ ಮತ್ತು ದಿ ಎಕನಾಮಿಕ್ಸ್ ಟೈಮ್ಸ್ ಸೇರಿದಂತೆ ಹಲವಾರು ಮಾಧ್ಯಮಗಳು ತಮ್ಮ ವರದಿಗಳಲ್ಲಿ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು- ಎಲ್ಲವೂ ಜೂನ್ ೧೦, ೨೦೨೨ ರಂದು ಪ್ರಕಟವಾಗಿವೆ.

ತೆಲಂಗಾಣದ ಮಹಬೂಬ್‌ನಗರದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದರು ಎಂದು ಟೈಮ್ಸ್ ನೌ ವರದಿ ತಿಳಿಸುತ್ತದೆ. ರ‍್ಯಾಲಿಯಲ್ಲಿ ನೂರಾರು ಜನರು ಉಪಸ್ಥಿತರಿದ್ದರು, ಅಲ್ಲಿ ಪ್ರತಿಭಟನಾಕಾರರು ಕಲ್ಮದೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದು ಕಂಡುಬಂದಿತ್ತು. ವರದಿಯ ಪ್ರಕಾರ, ಈ ಘಟನೆಯ ವೀಡಿಯೋ ಹೊರಬಂದ ನಂತರ, ಭಾರತೀಯ ಧ್ವಜಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು.

ಲಾಜಿಕಲಿ ಫ್ಯಾಕ್ಟ್ಸ್ ದೃಢೀಕರಣಕ್ಕಾಗಿ ಮಹಬೂಬ್‌ನಗರದ ೧-ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಈ ಫ್ಯಾಕ್ಟ್ ಚೆಕ್ ಅನ್ನು ನವೀಕರಿಸಲಾಗುತ್ತದೆ.

ಭಾರತೀಯ ಧ್ವಜಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳು ಯಾವುವು?

ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆ, ೧೯೭೧ (The Prevention of Insults to National Honor Act, 1971)  ರಾಷ್ಟ್ರಧ್ವಜ ಸೇರಿದಂತೆ ದೇಶದ ಎಲ್ಲಾ ರಾಷ್ಟ್ರೀಯ ಚಿಹ್ನೆಗಳನ್ನು ಅವಮಾನಿಸುವುದನ್ನು ನಿಷೇಧಿಸುತ್ತದೆ. ಯಾರಾದರೂ ತ್ರಿವರ್ಣ ಧ್ವಜವನ್ನು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಅಥವಾ ಸಾರ್ವಜನಿಕ ವೀಕ್ಷಣೆಯಲ್ಲಿ ಸುಟ್ಟರೆ, ವಿರೂಪಗೊಳಿಸಿದರೆ, ಮಾರ್ಪಡಿಸಿದರೆ, ಅಪವಿತ್ರಗೊಳಿಸಿದರೆ, ನಾಶಪಡಿಸಿದರೆ, ತುಳಿದರೆ ಅಥವಾ ಅವಹೇಳನ ಮಾಡಿದರೆ (ಪದಗಳ ಮೂಲಕ, ಮೌಖಿಕವಾಗಿ ಅಥವಾ ಬರವಣಿಗೆಯಲ್ಲಿ) ಜೈಲು ಶಿಕ್ಷೆಗೆ ಕಾರಣರಾಗುತ್ತಾರೆ ಮತ್ತು ಇದು ಮೂರು ವರ್ಷಗಳವರೆಗೆ ವಿಸ್ತರಿಸಬಹುದು, ಅಥವಾ ದಂಡದೊಂದಿಗೆ, ಅಥವಾ ಎರಡರ ಜೊತೆಗೆ ನೀಡಲಾಗಬಹುದು.

ತೀರ್ಪು

ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ನಂತರ ಭಾರತದ ಧ್ವಜದ ಮೇಲೆ ಕಲ್ಮ ಎಂದು ಬರೆಯಲಾಗಿದೆ ಎಂಬ ಹೇಳಿಕೆ ತಪ್ಪು. ಇದಕ್ಕೆ ಪುರಾವೆಯಾಗಿ ಬಳಸಲಾದ ವೈರಲ್ ವೀಡಿಯೋ ಇತ್ತೀಚಿನದ್ದಲ್ಲ, ಆದರೆ ಜೂನ್ ೨೦೨೨ ರದ್ದು. ತೆಲಂಗಾಣದ ಮಹಬೂಬ್‌ನಗರದಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರು ಅಶೋಕ ಚಕ್ರದ ಬದಲಿಗೆ ರಾಷ್ಟ್ರಧ್ವಜದ ಮೇಲೆ ಕಲ್ಮವನ್ನು ಬರೆದಿರುವ ಧ್ವಜವನ್ನು ಹಾರಿಸಿದಾಗ ವೀಡಿಯೋ ಸೆರೆಹಿಡಿಯಲಾಗಿದೆ. ಆದ್ದರಿಂದ,  ಈ ಹೇಳಿಕೆಯನ್ನು ತಪ್ಪು ಎಂದು ನಾವು ಗುರುತಿಸುತ್ತೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ