ಮೂಲಕ: ವಿವೇಕ್ ಜೆ
ಸೆಪ್ಟೆಂಬರ್ 11 2023
೨೦೧೫ರಲ್ಲಿ ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿ ಇಬ್ಬರನ್ನು ಥಳಿಸಿದ ವೀಡಿಯೋ ಇದಾಗಿದೆ. ಘಟನೆಗೂ ಇತ್ತೀಚಿನ ರಕ್ಷಾಬಂಧನ ಹಬ್ಬಕ್ಕೂ ಯಾವುದೇ ಸಂಬಂಧವಿಲ್ಲ.
ಇಲ್ಲಿನ ಹೇಳಿಕೆಯೇನು?
ಹಿಂದೂಗಳ ಹಬ್ಬವಾದ ರಕ್ಷಾ ಬಂಧನದಂದು ಹಿಂದೂ ಹುಡುಗಿಯೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಇತ್ತೀಚೆಗೆ ಗುಜರಾತ್‌ನಲ್ಲಿ ಪೊಲೀಸರು ಇಬ್ಬರು ಮುಸ್ಲಿಮರನ್ನು ಥಳಿಸಿದ್ದರು ಎಂಬ ಹೇಳಿಕೆಯೊಂದಿಗೆ ಇಬ್ಬರು ಪುರುಷರನ್ನು ಪೊಲೀಸ್ ಸಿಬ್ಬಂದಿ ಥಳಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ; ಇದನ್ನು ರಕ್ಷಾಬಂಧನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ.
ಫೇಸ್‌ಬುಕ್‌ನಲ್ಲಿನ ಒಂದು ಪೋಷ್ಟ್ ಇಂತಹ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದೆ, “ವೀಡಿಯೋ… ರಕ್ಷಾಬಂಧನದ ಸಂದರ್ಭದಲ್ಲಿ ಹಿಂದೂ ಹುಡುಗಿಯರಿಗೆ ಮುಸ್ಲಿಂ ಜಿಹಾದಿ ಕಿರುಕುಳ ನೀಡುತ್ತಿರುವುದನ್ನು ನೋಡಲಾಗಿದೆ. ಈ ಜಿಹಾದಿಗೆ ಗುಜರಾತ್ ಪೊಲೀಸರು ಸ್ಥಳದಲ್ಲೇ ಚಿಕಿತ್ಸೆ ನೀಡಿದರು." ಇಂತಹದ್ದೇ ಆದ ಕೋಮು ನಿರೂಪಣೆ ಮತ್ತು ನಿಂದನೆಗಳನ್ನು ಹಂಚಿಕೊಳ್ಳುವ ಪೋಷ್ಟ್ ಗಳನ್ನು ಇತರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಳ್ಳಲಾಗಿದೆ.
ರಕ್ಷಾ ಬಂಧನದಂದು ಇಬ್ಬರು ಆಪಾದಿತ ಕಿರುಕುಳಗಾರರನ್ನು ಗುಜರಾತ್ ಪೊಲೀಸರು ಥಳಿಸಿದ್ದಾರೆ ಎಂದು ಹೇಳುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋ ಹಳೆಯದಾಗಿದ್ದು, ರಕ್ಷಾ ಬಂಧನಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ನಾವು ಕಂಡುಹಿಡಿದಿದ್ದೇನು?
ನಾವು ವೈರಲ್ ವೀಡಿಯೋದಿಂದ ಕೆಲವು ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಡಿಸೆಂಬರ್ ೨೦೧೫ರ ಹಿಂದಿನ ಸುದ್ದಿ ವರದಿಗಳಲ್ಲಿ ಇಂತಹದ್ದೇ ಹಲವಾರು ವೀಡಿಯೋಗಳನ್ನು ನೋಡಿದ್ದೇವೆ. ಇಂಗ್ಲಿಷ್ ಮಾಧ್ಯಮ ಔಟ್‌ಲೆಟ್ ನ್ಯೂಸ್‌ಎಕ್ಸ್ ಇದೇ ರೀತಿಯ ದೃಶ್ಯಗಳನ್ನು (ವೈರಲ್ ಕ್ಲಿಪ್‌ನ ಜೂಮ್-ಇನ್ ಆವೃತ್ತಿ), ಡಿಸೆಂಬರ್ ೧೦, ೨೦೧೫ ರಂದು, "ಹುಡುಗಿಯರಿಗೆ ಕಿರಿಕುಳ ನೀಡುವವರನ್ನು ಗುಜರಾತ್‌ನ ಸೂರತ್‌ನಲ್ಲಿ ಕಾರಿಗೆ ಕಟ್ಟಿ ಥಳಿಸಲಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಅದರ ಯೂಟ್ಯೂಬ್ ಚಾನಲ್ ನಲ್ಲಿ ಹಂಚಿಕೊಂಡಿದೆ. ವೀಡಿಯೋದಲ್ಲಿ ಇಬ್ಬರು ಯುವಕರನ್ನು ಕಾರಿನ ಬಾನೆಟ್ ಮೇಲೆ ಮಲಗಿಸಿ ಪೊಲೀಸ್ ಅಧಿಕಾರಿ ಮತ್ತು ಸಿವಿಲ್ ಬಟ್ಟೆಯಲ್ಲಿದ್ದ ವ್ಯಕ್ತಿಯೊಬ್ಬರು ಥಳಿಸಿರುವುದನ್ನು ನಾವು ನೋಡಬಹುದು.
ಡಿಸೆಂಬರ್ ೯, ೨೦೧೫ ರಂದು ಯೂಟ್ಯೂಬ್‌ನಲ್ಲಿ ಇಂಡಿಯಾ ಟುಡೇ ಹಂಚಿಕೊಂಡ ಘಟನೆಯ ಮತ್ತೊಂದು ವೀಡಿಯೋ ವರದಿಯು ಅದೇ ದೃಶ್ಯಗಳನ್ನು ತೋರಿಸುತ್ತದೆ. ಗುಜರಾತ್‌ನ ಸೂರತ್‌ನಲ್ಲಿ ಪೊಲೀಸರು "ಇಬ್ಬರು ಆರೋಪಿ ಕಿರುಕುಳಗಾರರನ್ನು" ಥಳಿಸಿದ್ದಾರೆ ಎಂದು ಸುದ್ದಿವರದಿಯ ನಿರೂಪಕರು ಗಮನಿಸಿದ್ದಾರೆ.
೨೦೧೫ರಲ್ಲಿ ಸೂರತ್‌ನಲ್ಲಿ ಪೊಲೀಸರು ಇಬ್ಬರನ್ನು ಥಳಿಸುತ್ತಿರುವುದನ್ನು ತೋರಿಸುವ ಇಂಡಿಯಾ ಟುಡೇ ವೀಡಿಯೋ ವರದಿಯ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಯೂಟ್ಯೂಬ್/ಇಂಡಿಯಾ ಟುಡೇ)
ಡಿಸೆಂಬರ್ ೯ ೨೦೧೫ ರಂದು ಯೂಟ್ಯೂಬ್ ನಲ್ಲಿ ಎಬಿಪಿ ನ್ಯೂಸ್‌ನ ಮತ್ತೊಂದು ವೀಡಿಯೋ ವರದಿಯು ಅದೇ ದೃಶ್ಯಗಳನ್ನು ಹೊಂದಿದೆ. ಆಪಾದಿತ ಕಿರುಕುಳವನ್ನು ಹಿಡಿದಿರುವ ಇಬ್ಬರು ವ್ಯಕ್ತಿಗಳು ಪೊಲೀಸ್ ಸಿಬ್ಬಂದಿಯಾಗಿದ್ದು, ಸೂರತ್‌ನ ಲಿಂಬಾಯತ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯು ಗಮನಿಸಿದೆ. ವೀಡಿಯೋ ವರದಿಯಲ್ಲಿ ಪೊಲೀಸರು ಇಬ್ಬರನ್ನು ಸಾರ್ವಜನಿಕವಾಗಿ ಥಳಿಸಿದ ಕೃತ್ಯವನ್ನು ಪ್ರಶ್ನಿಸಲಾಗಿದೆ. ವರದಿಯಲ್ಲಿ ಆರೋಪಿಗಳಿಬ್ಬರನ್ನು ನದೀಮ್ ಮತ್ತು ಕಾದಿರ್ ಎಂದು ಗುರುತಿಸಲಾಗಿದೆ.
೨೦೧೫ರಲ್ಲಿ, ರಕ್ಷಾ ಬಂಧನವನ್ನು ಆಗಸ್ಟ್ ೨೯ ರಂದು ಆಚರಿಸಲಾಯಿತು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಹಬ್ಬಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿದೆ.
ವೈರಲ್ ವೀಡಿಯೋ ಹಳೆಯ ಘಟನೆಯಾಗಿದೆ ಮತ್ತು ಈ ವರ್ಷ ಆಗಸ್ಟ್ ೩೦ ರಂದು ಆಚರಿಸಲಾದ ರಕ್ಷಾ ಬಂಧನಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ತೀರ್ಪು
೨೦೧೫ರ ಡಿಸೆಂಬರ್‌ನಲ್ಲಿ ಗುಜರಾತ್‌ನ ಸೂರತ್ ಪೊಲೀಸರು ಇಬ್ಬರನ್ನು ಥಳಿಸಿರುವ ವೀಡಿಯೋ ಕ್ಲಿಪ್ ವೈರಲ್ ಆಗಿದೆ. ಈ ವೀಡಿಯೋ ಹಳೆಯದು ಮತ್ತು ರಕ್ಷಾ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
ಅನುವಾದಿಸಿದವರು: ವಿವೇಕ್.ಜೆ