ಮೂಲಕ: ವಿವೇಕ್ ಜೆ
ಅಕ್ಟೋಬರ್ 16 2023
ಈ ವೀಡಿಯೋ ೨೦೧೪ ರದ್ದು ಮತ್ತು ಸಿರಿಯಾದಲ್ಲಿ ಐಸಿಸ್ ಮಸೀದಿಯಮೇಲೆ ಬಾಂಬ್ ದಾಳಿ ಮಾಡುವುದನ್ನು ತೋರಿಸುತ್ತದೆ.
ಇಸ್ರೇಲಿ ಸೇನಾಪಡೆ ಮತ್ತು ಹಮಾಸ್ ಉಗ್ರಗಾಮಿಗಳ ನಡುವೆ ನಡೆಯುತ್ತಿರುವ ಯುದ್ಧದ ನಡುವೆ, ಇದೇ ಸಂಘರ್ಷದ ದೃಶ್ಯಗಳು ಎಂದು ಹೇಳಿಕೊಂಡು ಹಲವಾರು ತಪ್ಪು ಮಾಹಿತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಳ್ಳಲಾದ ಅಂತಹ ಒಂದು ವೀಡಿಯೋ, ಪ್ರಾರ್ಥನೆಯ ಸಮಯದಲ್ಲಿ ಇಸ್ರೇಲಿ ಪಡೆಗಳಿಂದ ಬಾಂಬ್ ದಾಳಿಗೊಳಗಾದ ಮಸೀದಿಯನ್ನು ತೋರಿಸುತ್ತದೆ. ವ್ಯಂಗ್ಯವಾಗಿ ಸೇರಿಸಲಾದ ಈ ಶೀರ್ಷಿಕೆಯು ಹೀಗೆ ಹೇಳುತ್ತದೆ, "ಇಸ್ರೇಲ್ ಇದನ್ನು ಮಾಡುವುದನ್ನು ನಾನು ಖಂಡಿಸುತ್ತೇನೆ. ಅಟ್ಲೀಸ್ಟ್ ಆಜಾನ್ ತೋ ಪುರಿ ಹೋನೆ ದೇತೆ(ಕನಿಷ್ಠ ಪ್ರಾರ್ಥನೆಯ ಕರೆಯನ್ನು ಮುಗಿಯಲು ಬಿಡಬೇಕಾಗಿತ್ತು).. #Israel #IsraelPalestineWar #Hamasattack#Gaza #ಇಸ್ರೇಲತ್ವಾರ್ (ಕನ್ನಡಕ್ಕೆ ಅನುವಾದಿಸಲಾಗಿದೆ)." ಹಿಂದಿ ಮತ್ತು ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಇದೇ ರೀತಿಯ ಪೋಷ್ಟ್ ಗಳನ್ನು ಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇತ್ತೀಚಿನ ಘರ್ಷಣೆಯ ಸಂದರ್ಭದಲ್ಲಿ ಇಸ್ರೇಲ್ ಮಸೀದಿಯ ಮೇಲೆ ಬಾಂಬ್ ದಾಳಿ ಮಾಡಿದೆ ಎಂಬ ವೀಡಿಯೋ ಒಳಗೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋ ಇತ್ತೀಚಿನ ಸಂಘರ್ಷದಿಂದಲ್ಲ ಮತ್ತು ೨೦೧೪ ರಲ್ಲಿ ಸಿರಿಯಾದ ಮಸೀದಿಯ ಮೇಲಿನ ಬಾಂಬ್ ದಾಳಿಯನ್ನು ತೋರಿಸುತ್ತದೆ.
ನಾವು ಕಂಡುಹಿಡಿದದ್ದೇನು?
ನಾವು ಈ ವೀಡಿಯೋವಿನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಟರ್ಕಿಯ ವೆಬ್‌ಸೈಟ್ ಆದ “ಪಿರ್ ಝೋಹ್ರೆ ಅನಾ ಫೋರಮ್”ನಲ್ಲಿ ಅದೇ ಚಿತ್ರವನ್ನು ಹೊಂದಿರುವ ವರದಿಯನ್ನು ಕಂಡುಕೊಂಡಿದ್ದೇವೆ. ೨೦೧೪ ರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ನಿಂದ ಬಾಂಬ್ ದಾಳಿಗೊಳಗಾದ ಸಿರಿಯಾದ ರಕ್ಕಾದಲ್ಲಿರುವ ಶಿಯಾ ಮಸೀದಿಯ ಚಿತ್ರವಾಗಿದೆ ಎಂದು ವರದಿಯು ಗಮನಿಸಿದೆ. ಐಸಿಸ್ ಸಿರಿಯಾದಲ್ಲಿ ಶಿಯಾ ಮಸೀದಿಯನ್ನು ಧ್ವಂಸಗೊಳಿಸಿದ ವರದಿಗಳನ್ನು ಹುಡುಕಿದಾಗ, ಸಿರಿಯಾದ ನಗರಗಳಲ್ಲಿ ಐಸಿಸ್ ನಿಂದ ಉಂಟಾದ ವಿನಾಶವನ್ನು ವಿವರಿಸುವ ಅಟ್ಲಾಂಟಿಕ್ ಕೌನ್ಸಿಲ್ ವರದಿಯನ್ನು ನಾವು ಕಂಡುಕೊಂಡಿದ್ದೇವೆ.
ಈ ವರದಿಯಿಂದ ಸುಳಿವುಗಳನ್ನು ತೆಗೆದುಕೊಂಡು ಸಿರಿಯಾದಲ್ಲಿ ಐಸಿಸ್ ನಿಂದ ವಿನಾಶಕ್ಕೊಳಗಾದ ಕಟ್ಟಡಗಳ ಹೆಸರುಗಳನ್ನು ಹುಡುಕಿದಾಗ, ಜೂನ್ ೮, ೨೦೧೪ ರಂದು ಯೂಟ್ಯೂಬ್ ಬಳಕೆದಾರರು 'ರೆಮಿ ಸುಂಗ್ ಸಬ್ ಯೂನ್' ಅವರು "ಐಸಿಸ್ ಉವೈಸ್ ಅಲ್-ಖರಾನಿ ದೇಗುಲವನ್ನು ಕೆಡವಿತು(ಕನ್ನಡಕ್ಕೆ ಅನುವಾದಿಸಲಾಗಿದೆ).” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿದ ವೀಡಿಯೋವನ್ನು ನಾವು ನೋಡಿದ್ದೇವೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಈ ವೀಡಿಯೋ ಒಳಗೊಂಡಿದೆ. ಸಿರಿಯಾದ ನಗರಗಳಲ್ಲಿ ಐಸಿಸ್‌ನಿಂದ ಉಂಟಾದ ವಿನಾಶದ ಕುರಿತು ಬಿಬಿಸಿ ಕೂಡ ವರದಿ ಮಾಡಿದೆ ಮತ್ತು ಇಂತಹ ಹಲವಾರು ಕಟ್ಟಡಗಳ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡಿದೆ.
ವೈರಲ್ ವೀಡಿಯೋ ಮತ್ತು ೨೦೧೪ ರ ಯೂಟ್ಯೂಬ್ ವೀಡಿಯೋವಿನ ಸ್ಕ್ರೀನ್‌ಶಾಟ್‌ಗಳ ಹೋಲಿಕೆ. (ಮೂಲ: ಎಕ್ಸ್/ಯೂಟ್ಯೂಬ್/ಸ್ಕ್ರೀನ್‌ಶಾಟ್)
ಸಿರಿಯಾದಲ್ಲಿ ಐಸಿಸ್ ನಾಶಮಾಡಿದ ಕೆಲವು ಕಟ್ಟಡಗಳನ್ನು ತೋರಿಸುವ ವೀಡಿಯೋವನ್ನು ಲೈವ್ ಮಿಂಟ್ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಕೂಡ ವೈರಲ್ ವೀಡಿಯೋದಲ್ಲಿ ಕಂಡುಬಂದ ಅದೇ ರೀತಿಯ ಕ್ಲಿಪ್ ಗಳನ್ನು ನೋಡಬಹುದು. ೨೦೧೪ ರಲ್ಲಿ ಐಸಿಸ್ ನಿಂದ ಬಾಂಬ್ ದಾಳಿಗೆ ಒಳಗಾಗುವ ಮೊದಲು ಮತ್ತು ನಂತರ ತೆಗೆಯಲಾದ ಮಸೀದಿಯ ಉಪಗ್ರಹ ಚಿತ್ರಗಳನ್ನು ನಾವು ಜಿಯೋಲೊಕೇಷನ್ ಮೂಲಕ ಕಂಡುಹಿಡಿದಿದ್ದೇವೆ.
ಬಾಂಬ್ ದಾಳಿಯ ಮೊದಲ ಮತ್ತು ನಂತರದ "ಉವೈಸ್ ಅಲ್ ಕರ್ನಿ" ಮಸೀದಿಯ ಉಪಗ್ರಹ ಚಿತ್ರಗಳ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಗೂಗಲ್ ಅರ್ಥ್)
ಸಿರಿಯಾದಲ್ಲಿ ಮಸೀದಿ ಇರುವ ಸ್ಥಳದ ಇತ್ತೀಚಿನ ಉಪಗ್ರಹ ಚಿತ್ರವು ಕಟ್ಟಡದ ಅಸ್ತಿತ್ವದ ಬಗ್ಗೆ ಬಹಳಷ್ಟು ಕಡಿಮೆ ಪುರಾವೆಗಳೊಂದಿಗೆ ಬಹುತೇಕ ಖಾಲಿಯಾಗಿರುವ ಜಾಗವನ್ನು ತೋರಿಸುತ್ತದೆ.
೨೦೨೨ ರಲ್ಲಿ ತೆಗೆದ ಉವೈಸ್ ಅಲ್ ಕರ್ನಿ ಮಸೀದಿಯ ಉಪಗ್ರಹ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಗೂಗಲ್ ಅರ್ಥ್)
ತೀರ್ಪು
ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್ ಮಸೀದಿಯ ಮೇಲೆ ಬಾಂಬ್ ದಾಳಿ ನಡೆಸುವುದನ್ನು ತೋರಿಸುವ ವೀಡಿಯೋ ಹಳೆಯದು. ೨೦೧೪ ರಲ್ಲಿ ಸಿರಿಯಾದ ರಕ್ಕಾದಲ್ಲಿರುವ ಶಿಯಾ ಮಸೀದಿಯ ಮೇಲೆ ಐಸಿಸ್ ಬಾಂಬ್ ದಾಳಿ ನಡೆಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. ಈ ಘಟನೆಗೂ ಇತ್ತೀಚೆಗೆ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ.
(ಅನುವಾದಿಸಿದವರು:ವಿವೇಕ್.ಜೆ)