ಮುಖಪುಟ ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋವನ್ನು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ಹಲ್ಲೆಯದ್ದೆಂದು ಹರಡಿಸಲಾಗಿದೆ

ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋವನ್ನು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ಹಲ್ಲೆಯದ್ದೆಂದು ಹರಡಿಸಲಾಗಿದೆ

ಮೂಲಕ: ವಿವೇಕ್ ಜೆ

ಮಾರ್ಚ್ 14 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರಿನಲ್ಲಿ ನಡೆದ ಘಟನೆಯ ವೀಡಿಯೋವನ್ನು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲಿನ ಹಲ್ಲೆಯದ್ದೆಂದು ಹರಡಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕ್ರಿಕೆಟ್ ಪಂದ್ಯಾವಳಿಯ ವೇಳೆ ಇಬ್ಬರು ಯುವಕರನ್ನು ಮಾರಣಾಂತಿಕವಾಗಿ ಇರಿದಿರುವ ವೀಡಿಯೋ ಕರ್ನಾಟಕದಲ್ಲಿ ನಡೆದ ಘಟನೆಯದ್ದು. ಈ ಘಟನೆಯಲ್ಲಿ ಯಾವುದೇ ವಲಸೆ ಕಾರ್ಮಿಕರು ಭಾಗಿಯಾಗಿಲ್ಲ.

ಸಂದರ್ಭ

ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ, ವಿಶೇಷವಾಗಿ ಬಿಹಾರದವರ ಮೇಲೆ, ತಮಿಳುನಾಡಿನಲ್ಲಿ ದಾಳಿ ನಡೆಯುತ್ತಿದೆ ಎಂದು ತೋರಿಸುವಂತಹ ವೀಡಿಯೋಗಳು ೨೦೨೩ ಫೆಬ್ರವರಿ ತಿಂಗಳ ಅಂತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳ ಸದಸ್ಯರು ಈ ನಿರೂಪಣೆಗಳನ್ನು ಹೊಂದಿರುವ ವೀಡಿಯೋಗಳನ್ನು ಹೆಚ್ಚಾಗಿ ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೋಗಳು ಹಳೆಯದು, ಸಂಬಂಧವಿಲ್ಲದ ಘಟನೆಗಳದ್ದು ಅಥವಾ ತಮಿಳುನಾಡಿನದ್ದಲ್ಲವೆಂದು ಸಾಬೀತಾಗಿದ್ದರೂ ಕೂಡ ಈ ವೀಡಿಯೋಗಳು ತಮಿಳುನಾಡಿನಲ್ಲಿನ ವಲಸೆ ಕಾರ್ಮಿಕರ ಮೇಲೆ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ತೋರಿಸುವಂತೆ ಹಂಚಿಕೊಂಡಿದ್ದಾರೆ. ರಕ್ತದಿಂದ ತೊಯ್ದ ಬಟ್ಟೆಯಲ್ಲಿ ನೆಲದ ಮೇಲೆ ಬಿದ್ದಿರುವ ಯುವಕನ ಅಂತಹ ಒಂದು ವೀಡಿಯೋವನ್ನು ತಮಿಳುನಾಡಿನಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ಬಿಹಾರದ ವಲಸೆ ಕಾರ್ಮಿಕನನ್ನು ತೋರಿಸುತ್ತದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ

ಈ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಹಿನ್ನೆಲೆಯಲ್ಲಿ ಜನರು ಕನ್ನಡದಲ್ಲಿ ಮಾತನಾಡುತ್ತಿರುವುದಾಗಿ ಕಂಡುಬಂದಿದೆ. ಅವರು ಹೇಳುತ್ತಿರುವುದೇನೆಂದರೆ "ಯಾರಣ್ಣ ಹಿಂಗ್ ಮಾಡಿರದು? ಏಯ್, ಇವುನ್ಗೂ ಚುಚ್ ಬಿಟ್ಟಿದ್ದಾರಲ್ಲೋ..ಯಾರಾದ್ರೂ ಒಂದು ಆಂಬುಲೆನ್ಸ್ ಕರೆಸಿ" ಎಂದು. ಇದು ಸೂಚಿಸುವುದೇನೆಂದರೆ ಈ ಘಟನೆಯಲ್ಲಿ ಕನಿಷ್ಠ ಇಬ್ಬರಿಗೆ ಗಂಭೀರವಾಗಿ ಗಾಯಗೊಂಡಿದೆ ಎಂದು, ಹಾಗೂ ವೀಡಿಯೋದ ಹಿನ್ನಲೆಯಲ್ಲಿ ಜನ ಕನ್ನಡದಲ್ಲಿ ಮಾತನಾಡುತ್ತಿರುವುದು ಸೂಚಿಸುವುದೇನೆಂದರೆ ಚಾಕುವಿನಿಂದ ಇರಿದ ಈ ಘಟನೆಯು ಕರ್ನಾಟಕದಲ್ಲಿ ನಡೆದಿರಬಹುದು ಎಂದು.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಚಾಕು ದಾಳಿ ಪ್ರಕರಣಗಳ ಬಗ್ಗೆಯ ಸುದ್ದಿ ವರದಿಗಳಿಗಾಗಿ ಹುಡುಕಿ ನೋಡಿದಾಗ, ಫೆಬ್ರವರಿ ೧೮, ೨೦೨೩ರಂದು ದಿ ಹಿಂದೂ ಪ್ರಕಟಿಸಿದ ವರದಿಯೊಂದು ನಮ್ಮ ಗಮನಕ್ಕೆ ಕಂಡುಬಂತು. ಈ ಸುದ್ದಿ ವರದಿಯು ಬೆಂಗಳೂರಿನ ಸಮೀಪದಲ್ಲಿ ಕ್ರಿಕೆಟ್ ಪಂದ್ಯಾವಳಿಯಂದು ನಡೆಯುತ್ತಿದ್ದಾಗ ಉಂಟಾದ ಘಟನೆಯಲ್ಲಿ ಪಾರ್ಕಿಂಗ್ ವಿಶಿಯದಲ್ಲಿ ಉಂಟಾದ ಜಗಳದ ಫಲವಾಗಿ ಇಬ್ಬರು ಯುವಕರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹುಡುಕಿದಾಗ ಇದೇ ವಿಷಯದ ಬಗ್ಗೆ ಡೆಕ್ಕನ್ ಹೆರಾಲ್ಡ್ ಪ್ರಕಟಿಸಿದ ವರದಿಯೊಂದು ನಮ್ಮ ಗಮನಕ್ಕೆ ಬಂತು. ಈ ಸುದ್ದಿ ವರದಿಯಲ್ಲಿ ಕೊಲೆಯಾದ ಇಬ್ಬರು ಯುವಕರ ಛಾಯಾಚಿತ್ರವನ್ನು ಕೂಡ ಪ್ರಕಟಿಸಲಾಗಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ಹಾಗು ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಮಾಧ್ಯಮಗಳು ಕೂಡಾ ಈ ಘಟನೆಯ ಬಗ್ಗೆ ವರದಿ ಮಾಡಿದ್ದಾರೆ. ವರದಿಗಳ ಪ್ರಕಾರ ಈ ಯುವಕರ ಕೊಲೆಯಾದದ್ದು ಫೆಬ್ರವರಿ ೧೭, ೨೦೨೩ರಂದು ದೊಡ್ಡಬಳ್ಳಾಪುರದ ದೊಡ್ಡಬೆಳವಂಗಳ ಗ್ರಾಮದಲ್ಲಿ. ೨೩ ವಯಸ್ಸಿನವರಾಗಿದ್ದ ಭರತ್ ಕುಮಾರ್ ಹಾಗು ೧೭ ವಯಸ್ಸಿನವರಾಗಿದ್ದ ಪಿಯುಸಿ ವಿದ್ಯಾರ್ಥಿ ಪ್ರತೀಕ್ ಮೃತಪಟ್ಟ ಯುವಕರು.

ತಮಿಳುನಾಡಿನದ್ದು ಎಂದು ಪ್ರಚಾರಗೊಂಡಿರುವ ಈ ವೀಡಿಯೋವಿನ ಕುರಿತು ಲಾಜಿಕಲಿ ದೊಡ್ಡಬೆಳವಂಗಳ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಅಲ್ಲಿನ ಪೊಲೀಸ್ ಅಧಿಕಾರಿ ಒಬ್ಬರು ವೀಡಿಯೋ ದೊಡ್ಡಬೆಳವಂಗಲದಲ್ಲಿ ಫೆಬ್ರವರಿ ೧೭ ರೆಂದು ನಡೆದ ಘಟನೆಯದ್ದು ಎಂದು ಹೇಳಿದರು. ಕ್ರಿಕೆಟ್ ಪಂದ್ಯಾವಳಿಯ ವೇಳೆ ನಡೆದ ಗಲಭೆಯಿಂದಾಗಿ ನಡೆದ ಘಟನೆಯಲ್ಲಿ ಇಬ್ಬರು ಯುವಕರು ಚಾಕುವಿನಿಂದ ಇರಿದ ಪರಿಣಾಮವಾಗಿ ಮೃತಪಟ್ಟಿದ್ದರು ಹಾಗು ಈ ಘಟನೆಯಲ್ಲಿ ಭಾಗಿಯಾದವರು ಸ್ಥಳೀಯರೇ, ಇದರಲ್ಲಿ ಯಾವುದೇ ವಲಸೆ ಕಾರ್ಮಿಕರು ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸುದ್ದಿ ವರದಿಗಳು ಮತ್ತು ಕರ್ನಾಟಕ ಪೊಲೀಸರ ಮಾಹಿತಿಯ ಆಧಾರದ ಮೇಲೆ, ಘಟನೆಯಲ್ಲಿ ಯಾವುದೇ ವಲಸೆ ಕಾರ್ಮಿಕರು ಭಾಗಿಯಾಗಿಲ್ಲ ಅಥವಾ ತಮಿಳುನಾಡಿನಲ್ಲಿ ಸಂಭವಿಸಿಲ್ಲ ಎಂದು ಸ್ಪಷ್ಟವಾಗಿದೆ. ಹೀಗಿರುವಾಗ, ತಮಿಳುನಾಡು ಪೊಲೀಸರು ವಲಸೆ ಕಾರ್ಮಿಕರ ಮೇಲಿನ ಆಪಾದಿತ ದಾಳಿಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಪೊಲೀಸರು ಮತ್ತು ರಾಜ್ಯ ಸರ್ಕಾರವು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರನ್ನು ಗುರಿಯಾಗಿಸುತ್ತಿರುವ ಬಗ್ಗೆಯ ಪ್ರಚಾರಗಳನ್ನು ತಳ್ಳಿಹಾಕಿದೆ. ಅಲ್ಲಿನ ಪೊಲೀಸರು ವಲಸೆ ಕಾರ್ಮಿಕರಿಗಾಗಿ ಎರಡು ಸಹಾಯವಾಣಿಗಳನ್ನು ಸಹ ಪ್ರಾರಂಭಿಸಿದ್ದು ಅವರ ಭಯವನ್ನು ಹೋಗಲಾಡಿಸಲು ಔಟ್‌ರೀಚ್ ಕಾರ್ಯಕ್ರಮವೊಂದನ್ನು ಸಹ ಪ್ರಾರಂಭಿಸಲಾಗಿದೆ.

ತಮಿಳುನಾಡಿನ ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಸುಳ್ಳು ಹೇಳಿಕೆಗಳನ್ನು ಪರಿಹರಿಸಲು ಬಿಹಾರ ಸರ್ಕಾರದೊಂದಿಗೆ ಸಹಕರಿಸಿ ಬಂದಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಮತ್ತು ಅವರನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದರು. ಅನಂತರ, ತಮಿಳುನಾಡು ಪೊಲೀಸರು ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ಪ್ರಶಾಂತ್ ಉಮ್ರಾವ್, ಆಪ್ ಇಂಡಿಯಾದ ಸಿಇಒ ಮತ್ತು ಸಂಪಾದಕರು, ಹಿಂದಿ ದಿನಪತ್ರಿಕೆ ದೈನಿಕ್ ಭಾಸ್ಕರ್ ನ ಸಂಪಾದಕರು ಮತ್ತು ಟ್ವಿಟರ್ ಬಳಕೆದಾರರ ಮೊಹಮ್ಮದ್ ತನ್ವೀರ್ ಶುಭಂ ಶುಕ್ಲಾ ಮತ್ತು ಯುವರಾಜ್ ಸಿಂಗ್ ರಜಪೂತ್ ಸೇರಿದಂತೆ ಹಲವರ ವಿರುದ್ಧ ತಪ್ಪು ಮಾಹಿತಿ ಹರಡಿಸಿದ್ದಾರೆಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದಾರೆ.

ತೀರ್ಪು

ಫೆಬ್ರವರಿ ೧೭, ೨೦೨೩ ರೆಂದು ಬೆಂಗಳೂರಿನ ಸಮೀಪದ ದೊಡ್ಡಬಳ್ಳಾಪುರದ ದೊಡ್ಡಬೆಳವಂಗದಲ್ಲಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ನಡೆದ ಗಲಭೆಯ ನಂತರ ಇಬ್ಬರು ಯುವಕರ ಕೊಲೆಯಾಯಿತು.ಈ ಘಟನೆಯ ವೀಡಿಯೋ ಕ್ಲಿಪ್ ಅನ್ನು ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆದ ಹಲ್ಲೆಯದ್ದು ಎಂದು ದುರುದ್ದೇಶಪೂರಿತವಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ