ಮೂಲಕ: ರಾಹುಲ್ ಅಧಿಕಾರಿ
ಡಿಸೆಂಬರ್ 22 2023
ದಾವೂದ್ ಇಬ್ರಾಹಿಂನ ಸಾವನ್ನು ಪಾಕಿಸ್ತಾನದ ನಾಯಕತ್ವವು ದೃಢಪಡಿಸಿದೆ ಎಂದು ತಪ್ಪಾಗಿ ಹೇಳಲು ಎಡಿಟ್ ಮಾಡಿದ ಎರಡು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳಲಾಗಿದೆ.
ಡಿಸೆಂಬರ್ ೧೭ ರಂದು, ಕುಖ್ಯಾತ ದರೋಡೆಕೋರ ದಾವೂದ್ ಇಬ್ರಾಹಿಂ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಊಹಾಪೋಹಗಳು ಕಾಣಿಸಿಕೊಂಡಿದ್ದು, ಅವರಿಗೆ ವಿಷ ನೀಡಲಾಗಿದೆ ಎಂದು ವದಂತಿಗಳಿವೆ. ಈ ಊಹಾಪೋಹವನ್ನು ಪಾಕಿಸ್ತಾನಿ ಯೂಟ್ಯೂಬರ್‌ನ ವೀಡಿಯೋದಿಂದ ವರ್ಧಿಸಲಾಗಿದ್ದು, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯಿತು. ಆದರೆ, ನಂಬಲರ್ಹ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೆಯ ಡಿಸೆಂಬರ್ ೧೮ ರ ವರದಿಯು ಈ ವದಂತಿಗಳನ್ನು ನಿರಾಕರಿಸಿದೆ.
ಇಲ್ಲಿನ ಹೇಳಿಕೆಯೇನು?
ಈ ವದಂತಿಗಳ ನಡುವೆ, ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್) ನಿಂದ ಎರಡು ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳಿಂದ ತುಂಬಿತ್ತು. ಇವು ಇಬ್ರಾಹಿಂ ಅವರ ಸಾವನ್ನು ದೃಢೀಕರಿಸುತ್ತದೆ ಎಂದು ಹೇಳಿಕೊಂಡಿದ್ದವು. ಪಾಕಿಸ್ತಾನದ ನಿಯೋಜಿತ ಪ್ರಧಾನಿ ಅನ್ವಾರ್-ಉಲ್-ಹಕ್ ಕಾಕರ್ ಮತ್ತು ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರದ್ದೆಂದು ಹೇಳಲಾದ ಈ ಪೋಷ್ಟ್ ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಕಾಕರ್ ಅವರದ್ದೆಂದು ಭಾವಿಸಲಾದ ಪೋಷ್ಟ್ ಇಬ್ರಾಹಿಂ ಅವರನ್ನು ಹೀಗೆ ಶ್ಲಾಘಿಸಿದೆ, "ಮನುಷ್ಯತ್ವದ ಉದ್ಧಾರಕ, ಪ್ರತಿ ಪಾಕಿಸ್ತಾನಿ ಹೃದಯಕ್ಕೆ ಪ್ರಿಯ, ನಮ್ಮ ಪ್ರೀತಿಯ ಹಿಸ್ ಎಕ್ಸಲೆನ್ಸಿ ದಾವೂದ್ ಇಬ್ರಾಹಿಂ ಅಪರಿಚಿತರಿಂದ ವಿಷ ಸೇವಿಸಿ ನಿಧನರಾದರು. ಅವರು ಕರಾಚಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಲ್ಲಾ ಅವರಿಗೆ ಅತ್ಯುನ್ನತವಾದ ದಯೆಯನ್ನು ನೀಡಲಿ( ಕನ್ನಡಕ್ಕೆ ಅನುವಾದಿಸಲಾಗಿದೆ)." ಒಬ್ಬ ಬಳಕೆದಾರರು ಎಕ್ಸ್ ನಲ್ಲಿ ಈ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಇದು ೩೧೨,೦೦೦ ವೀಕ್ಷಣೆಗಳು ಮತ್ತು ೬೭೭ ಲೈಕ್ ಗಳನ್ನು ಗಳಿಸಿದೆ. ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಷರೀಫ್ ಅವರ ಉದ್ದೇಶಿತ ಪೋಷ್ಟ್ ಹೀಗೆ ಹೇಳಿಕೊಂಡಿದೆ, “ಪಾಕಿಸ್ತಾನದ ಜವಾಬ್ದಾರಿಯುತ ಪ್ರಜೆಯಾದ ಹಿಸ್ ಹೈನೆಸ್ ದಾವೂದ್ ಇಬ್ರಾಹಿಂಗೆ ವಿಷಪ್ರಾಶನವನ್ನು ನಾನು ಖಂಡಿಸುತ್ತೇನೆ. ಮಾನವೀಯತೆಗೆ ಅವರ ಕೊಡುಗೆ ಅವಿಸ್ಮರಣೀಯ. ಇದು ಇಡೀ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದ ಜನರಿಗೆ ಬಹಳ ದುಃಖದ ಸಮಯ. ಅಲ್ಲಾಹನು ಅವರಿಗೆ ಕ್ಷಮೆಯನ್ನು ನೀಡಲಿ ಮತ್ತು ಜನ್ನತ್‌ನಲ್ಲಿ ಉನ್ನತ ಸ್ಥಾನವನ್ನು ಪಡೆಯಲಿ. ” ಮತ್ತೊಬ್ಬ ಬಳಕೆದಾರರು ಎಕ್ಸ್ ನಲ್ಲಿ ಎರಡೂ ಸ್ಕ್ರೀನ್‌ಶಾಟ್‌ಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
ಎಕ್ಸ್ ನಲ್ಲಿ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ಸ್ಕ್ರೀನ್‌ಶಾಟ್‌ಗಳನ್ನು ಡಿಜಿಟಲ್ ಎಡಿಟಿಂಗ್ ಪರಿಕರಗಳನ್ನು ಬಳಸಿ ತಯಾರಿಸಲಾಗಿದೆ. ಪಾಕಿಸ್ತಾನದ ಯಾವುದೇ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡಿಲ್ಲ.
ನಾವು ಕಂಡುಹಿಡಿದದ್ದೇನು?
ಇಬ್ರಾಹಿಂ ಸಾವಿನ ಸುದ್ದಿಯನ್ನು ಪಾಕಿಸ್ತಾನ ಸರ್ಕಾರ, ಪ್ರಧಾನಿ ಅಥವಾ ಯಾವುದೇ ಇತರ ಅಧಿಕಾರಿಗಳು ಖಚಿತಪಡಿಸಿದ್ದಾರೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಆದರೆ, ಪಾಕಿಸ್ತಾನದ ನಾಯಕತ್ವವು ಅಂತಹ ಹೇಳಿಕೆಗಳನ್ನು ನೀಡುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.
ಹೆಚ್ಚುವರಿಯಾಗಿ, ನಾವು ಪೋಷ್ಟ್ ಗಳನ್ನು ಹೋಲಿಸಲು ಸಾಧ್ಯವಾಯಿತು ಮತ್ತು ಪೋಷ್ಟ್ ಗಳ ಫಾರ್ಮ್ಯಾಟಿಂಗ್ ನಿಜವಾದ ಎಕ್ಸ್ ಪೋಷ್ಟ್ ಗಳಿಗಿಂತ ಭಿನ್ನವಾಗಿದೆ ಎಂದು ಕಂಡುಕೊಂಡಿದ್ದೇವೆ.
ಅನ್ವಾರ್-ಉಲ್-ಹಕ್ ಕಾಕರ್ ಅವರದ್ದೆಂಬ ವೈರಲ್ ಪೋಷ್ಟ್ ಗಳು
ಕಾಕರ್ ಅವರ ಉದ್ದೇಶಿತ ಎಕ್ಸ್ ಪೋಷ್ಟ್ ಆಂಡ್ರಾಯ್ಡ್ ಫೋನ್ ನಿಂದ ಹಂಚಿಕೊಂಡಿರುವುದಾಗಿ ಕಂಡುಬಂದಿದೆ ಎಂದು ನಾವು ಗಮನಿಸಿದ್ದೇವೆ. ಪಠ್ಯದ ಗಾತ್ರ, ದಿನಾಂಕಗಳು ಮತ್ತು ಎಳೆತದ ಟೈಲ್ ಎಕ್ಸ್ ನಲ್ಲಿನಂತೆ ಕಾಣಿಸುತ್ತಿಲ್ಲ. ಇದಲ್ಲದೆ, ಎಕ್ಸ್ ಪೋಷ್ಟ್ ಗಳು ಡೇಟ್‌ಲೈನ್, ಎಳೆತದ ಟೈಲ್ ಮತ್ತು ಕಾಮೆಂಟ್‌ಗಳ ವಿಭಾಗವನ್ನು ವಿಭಜಿಸುವ ನೇರ ರೇಖೆಗಳನ್ನು ಹೊಂದಿರುತ್ತವೆ. ಆದರೆ, ವೈರಲ್ ಸ್ಕ್ರೀನ್‌ಶಾಟ್ ಆ ಸಾಲುಗಳನ್ನು ಹೊಂದಿಲ್ಲ. ನಾವು ವೈರಲ್ ಸ್ಕ್ರೀನ್‌ಶಾಟ್ ಅನ್ನು ಕಾಕರ್ ಅವರ ಅಧಿಕೃತ ಖಾತೆಯಿಂದ ಹಂಚಿಕೊಳ್ಳಲಾದ ಎಕ್ಸ್ ಪೋಷ್ಟ್ ನ ಆಂಡ್ರಾಯ್ಡ್ ಆವೃತ್ತಿಯ ಸ್ಕ್ರೀನ್‌ಶಾಟ್‌ನೊಂದಿಗೆ ಹೋಲಿಸಿದಾಗ ಇದರಲ್ಲಿ ವ್ಯತ್ಯಾಸಗಳನ್ನು ಗಮನಿಸಿದ್ದೇವೆ.
ಇದಲ್ಲದೆ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿನ ಬಳಕೆದಾರರ ಹೆಸರಿನ ಕಾಗುಣಿತವು ಕಾಕರ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಕಂಡುಬರುವ ಬಳಕೆದಾರರ ಹೆಸರಿಗಿಂತ ಭಿನ್ನವಾಗಿರುವುದನ್ನು ನಾವು ಗಮನಿಸಿದ್ದೇವೆ. ಕಾಕರ್ ಅವರ ನೈಜ ಖಾತೆಯು ‘ಅನ್ವಾರ್_ಕಾಕರ್’ ಎಂಬ ಹೆಸರನ್ನು ಬಳಸಿದರೆ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಬಳಕೆದಾರರ ಹೆಸರು ಹೆಚ್ಚುವರಿ ‘ಕೆ.’ ಜೊತೆಗೆ ‘ಅನ್ವಾರ್_ಕಕ್ಕರ್’ ಆಗಿದೆ.
ವೈರಲ್ ಪೋಷ್ಟ್ ಮತ್ತು ಅನ್ವಾರ್ ಉಲ್ ಹಕ್ ಕಾಕರ್ ಅವರ ನಿಜವಾದ ಎಕ್ಸ್ ಪೋಷ್ಟ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರರ ಹೆಸರು ಅನ್ವಾರ್ ಉಲ್ ಹಕ್ ಕಾಕರ್ (ಅಭಿಮಾನಿಗಳು) ಎಂಬ ಎಕ್ಸ್ ಖಾತೆಗೆ ಸೇರಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ, ಈ ಖಾತೆಯಲ್ಲಿ ಪ್ರಶ್ನೆಯಲ್ಲಿರುವ ಪೋಷ್ಟ್ ನಮಗೆ ಕಾಣಿಸಲಿಲ್ಲ. ನಾವು ಸಾಮಾಜಿಕ ಮಾಧ್ಯಮ ವಿಶ್ಲೇಷಣೆ ವೆಬ್‌ಸೈಟ್ ಸೋಶಿಯಲ್ ಬ್ಲೇಡ್ ಅನ್ನು ಬಳಸಿದ್ದೇವೆ ಮತ್ತು ಕಳೆದ ೩೦ ದಿನಗಳಲ್ಲಿ ಈ ಖಾತೆಯಿಂದ ಯಾವುದೇ ಪೋಷ್ಟ್ ಗಳನ್ನು ಹಂಚಿಕೊಂಡಿಲ್ಲ ಎಂದು ಕಂಡುಬಂದಿದೆ.
ನಂತರ ನಾವು ಕಾಕರ್ ಅವರ ಅಧಿಕೃತ ಎಕ್ಸ್ ಖಾತೆಯನ್ನು ಪರಿಶೀಲಿಸಿದಾಗ ಅಲ್ಲಿ ಡಿಸೆಂಬರ್ ೧೮ ರ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ನೋಡಿದಂತಹ ಯಾವುದೇ ಪೋಷ್ಟ್ ಗಳನ್ನು ಕಂಡುಹಿಡಿಯಲಾಗಲಿಲ್ಲ. ಕಾಕರ್ ಅವರು ಡಿಸೆಂಬರ್ ೧೮ ರಂದು ಪಾಕಿಸ್ತಾನ ಮತ್ತು ನಾರ್ವೆ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವ ೭೫ ನೇ ವಾರ್ಷಿಕೋತ್ಸವದ ಶುಭಾಶಯಗಳೊಂದಿಗೆ ಒಂದೇ ಒಂದು ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಇಬ್ರಾಹಿಂ ಸಾವಿನ ಆರೋಪದ ಬಗ್ಗೆ ಅವರು ಏನನ್ನೂ ಪೋಷ್ಟ್ ಮಾಡಿಲ್ಲ. ನಾವು ವೇಬ್ಯಾಕ್ ಮೆಷಿನ್‌ನಲ್ಲಿ ಎಕ್ಸ್ ಖಾತೆಯ ಆರ್ಕೈವ್ ಮಾಡಿದ ಪೋಷ್ಟ್ ಗಳನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಅಂತಹ ಯಾವುದೇ ಪೋಷ್ಟ್ ಗಳು ಕಾಣಿಸಿಕೊಂಡಿಲ್ಲ.
ಶೆಹಬಾಜ್ ಷರೀಫ್ ಅವರದ್ದೆಂದು ಹೇಳಲಾದ ವೈರಲ್ ಪೋಷ್ಟ್
ಷರೀಫ್ ಅವರ ಉದ್ದೇಶಿತ ಎಕ್ಸ್ ಪೋಷ್ಟ್ ನ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರರ ಹೆಸರು ಅವರ ಮೂಲ ಖಾತೆಯಂತೆಯೇ ಇದೆ. ಇದಲ್ಲದೆ, ವೈರಲ್ ಸ್ಕ್ರೀನ್‌ಶಾಟ್ ಪೋಷ್ಟ್ ನ ಟ್ರಾಕ್ಷನ್ ಅಥವಾ ಪೋಷ್ಟ್ ಮಾಡಿದ ದಿನಾಂಕವನ್ನು ತೋರಿಸುವುದಿಲ್ಲ.
ನಾವು ಷರೀಫ್ ಅವರ ಎಕ್ಸ್ ಖಾತೆಯನ್ನು ಪರಿಶೀಲಿಸಿದಾಗ, ಪಾಕಿಸ್ತಾನದ ಮಾಜಿ ಪ್ರಧಾನಿಯಾದ ಅವರು ಡಿಸೆಂಬರ್ ೧೭ ರಿಂದ ಮೂರು ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಅವುಗಳಲ್ಲಿ ಯಾವೂ ಇಬ್ರಾಹಿಂ ಅವರ ಆಪಾದಿತ ಸಾವಿಗೆ ಸಂಬಂಧಿಸಿಲ್ಲ. ನಾವು ಷರೀಫ್ ಅವರ ಎಕ್ಸ್ ಖಾತೆಯ ಬಗ್ಗೆ ವೇಬ್ಯಾಕ್ ಮೆಷಿನ್ ಅನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಆರ್ಕೈವ್‌ಗಳಲ್ಲಿ ವೈರಲ್ ಪೋಷ್ಟ್ ಅನ್ನು ಕಂಡುಹಿಡಿಯಲಾಗಲಿಲ್ಲ.
ವೈರಲ್ ಪೋಷ್ಟ್ ಮತ್ತು ಶೆಹಬಾಜ್ ಷರೀಫ್ ಹಂಚಿಕೊಂಡ ನಿಜವಾದ ಎಕ್ಸ್ ಪೋಷ್ಟ್ ಒಂದರ ನಡುವಿನ ಹೋಲಿಕೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಷರೀಫ್ ಮತ್ತು ಕಾಕರ್ ಅವರ ಎಕ್ಸ್ ಖಾತೆಯ ಚಟುವಟಿಕೆ
ಕಾಕರ್ ಮತ್ತು ಷರೀಫ್ ಅವರ ಅಧಿಕೃತ ಖಾತೆಗಳಲ್ಲಿನ ಚಟುವಟಿಕೆಗಳನ್ನು ಪತ್ತೆಹಚ್ಚಲು ನಾವು ಸೋಶಿಯಲ್ ಬ್ಲೇಡ್ ಅನ್ನು ಸಹ ಬಳಸಿದ್ದೇವೆ. ಸೋಶಿಯಲ್ ಬ್ಲೇಡ್ ಪ್ರಕಾರ, ಕಾಕರ್ ಮತ್ತು ಷರೀಫ್ ಡಿಸೆಂಬರ್ ೬ ರಿಂದ ಎಕ್ಸ್ ನಲ್ಲಿ ಯಾವುದೇ ಪೋಷ್ಟ್ ಗಳನ್ನು ಡಿಲೀಟ್ ಮಾಡಿಲ್ಲ. ಡಿಸೆಂಬರ್ ೧೭ ರಂದು ಇಬ್ರಾಹಿಂ ಸಾವಿನ ಬಗ್ಗೆ ಪರಿಶೀಲಿಸದ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಅಂದಿನಿಂದ, ಈ ಎರಡೂ ಖಾತೆಗಳಿಂದ ಯಾವುದೇ ಪೋಷ್ಟ್ ಗಳನ್ನು ಡಿಲೀಟ್ ಮಾಡಲಾಗಿಲ್ಲ.
ಕೆಳಗಿನ ಚಿತ್ರದಲ್ಲಿ, ಫಾಲೋವರ್ಸ್ ಮತ್ತು ಫಾಲೋವಿಂಗ್ ಕಾಲಮ್ ಗಳ ಅಡಿಯಲ್ಲಿ ಕಾಣಿಸಿಕೊಳ್ಳುವ (+) ಮತ್ತು (-) ಚಿಹ್ನೆಗಳು ಮತ್ತು ಕೆಳಗಿನ ಕಾಲಮ್‌ಗಳು ಅನುಕ್ರಮವಾಗಿ ಗಳಿಸಿದ/ಕಳೆದುಕೊಂಡ ಅನುಯಾಯಿಗಳು ಮತ್ತು ಅನುಸರಣೆಗಳ ಸಂಖ್ಯೆಯನ್ನು ಸೂಚಿಸುತ್ತವೆ. 'ಟ್ವೀಟ್‌ಗಳು' ಎಂಬ ಕಾಲಮ್‌ನ ಅಡಿಯಲ್ಲಿರುವ ಚಿಹ್ನೆಗಳು ಮಾಡಿದ/ಡಿಲೀಟ್ ಮಾಡಲಾದ ಪೋಷ್ಟ್ ಗಳ ಸಂಖ್ಯೆಯನ್ನು ಸೂಚಿಸುತ್ತವೆ. ಡಿಸೆಂಬರ್ ೧೭ ರಿಂದ ಷರೀಫ್ ಅಥವಾ ಕಾಕರ್ ಯಾವುದೇ ಪೋಷ್ಟ್ ಗಳನ್ನು ಡಿಲೀಟ್ ಮಾಡಿಲ್ಲ ಎಂಬುದು ನಾವು ಇಲ್ಲಿ ನೋಡಬಹುದು.
ಅನ್ವಾರ್ ಉಲ್ ಹಕ್ ಕಾಕರ್ ಮತ್ತು ಶೆಹಬಾಜ್ ಷರೀಫ್ ಅವರ ಎಕ್ಸ್ ಖಾತೆಗಳ ವಿಶ್ಲೇಷಣೆ. (ಮೂಲ: ಸೋಶಿಯಲ್ ಬ್ಲೇಡ್)
ತೀರ್ಪು
ದಾವೂದ್ ಇಬ್ರಾಹಿಂ ಸಾವಿನ ಕುರಿತು ಅನ್ವಾರ್-ಉಲ್-ಹಕ್ ಕಾಕರ್ ಮತ್ತು ಶೆಹಬಾಜ್ ಷರೀಫ್ ಅವರದ್ದೆಂದು ಹೇಳಿಕೊಂಡು ವೈರಲ್ ಆದ ಎಕ್ಸ್ ಪೋಷ್ಟ್ ಗಳು ಕಟ್ಟುಕಥೆಗಳಾಗಿವೆ. ಪಾಕಿಸ್ತಾನದ ನಿಯೋಜಿತ ಪ್ರಧಾನಿಯಾಗಲಿ ಅಥವಾ ಮಾಜಿ ಪ್ರಧಾನಿಯಾಗಲಿ ಇಬ್ರಾಹಿಂ ಸಾವನ್ನು ಎಕ್ಸ್ ನಲ್ಲಿ ದೃಢಪಡಿಸಲಿಲ್ಲ.
(ಅನುವಾದಿಸಿದವರು:ವಿವೇಕ್.ಜೆ)
Read the English version of this fact-check here