ಮೂಲಕ: ರೋಹಿತ್ ಗುಟ್ಟಾ
ಏಪ್ರಿಲ್ 10 2024
ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ. ಎಬಿಎನ್ ಆಂಧ್ರಜ್ಯೋತಿ, ತಾವು ಈ ಸುದ್ದಿಯನ್ನು ಎಂದಿಗೂ ಪ್ರಸಾರ ಮಾಡಿಲ್ಲ ಮತ್ತು ಅದು ಫೇಕ್ ಎಂದು ಸ್ಪಷ್ಟನೆ ನೀಡಿದೆ.
ಹೇಳಿಕೆ ಏನು?
ಮುಂಬರುವ ಲೋಕಸಭೆ ಚುನಾವಣೆಗೆ ತೆಲುಗು ದೇಶಂ ಪಕ್ಷ (ಟಿಡಿಪಿ) ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲವನ್ನು ನೀಡಲಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ತೆಲುಗು ಸುದ್ದಿ ವಾಹಿನಿ ಎಬಿಎನ್ ಆಂಧ್ರಜ್ಯೋತಿಯ ೧೭ ಸೆಕೆಂಡುಗಳ ವೀಡಿಯೋವನ್ನು ವ್ಯಾಪಕವಾಗಿ ಕಂಚಿಕೊಂಡಿದ್ದಾರೆ.
ವಿರೋಧ ಪಕ್ಷದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಕಡಪಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರನ್ನು ಪರೋಕ್ಷವಾಗಿ ಅನುಮೋದಿಸುತ್ತಿದ್ದಾರೆ ಎಂದು ವೀಡಿಯೋ ಸೂಚಿಸುತ್ತದೆ. ಕ್ಲಿಪ್ ಪ್ರಕಾರ, ಟಿಡಿಪಿ ಅಭ್ಯರ್ಥಿ ಭೂಪೇಶ್ ರೆಡ್ಡಿ ಅವರು ಶರ್ಮಿಳಾ ವಿರುದ್ಧ "ಸೌಹಾರ್ದ ಸ್ಪರ್ಧೆ" ಯಲ್ಲಿ ತೊಡಗಿದ್ದಾರೆ, ಮತ್ತು ನಾಯ್ಡು, ಶರ್ಮಿಳಾ ಅವರ ಗೆಲುವಿಗೆ ಸಹಕರಿಸುವಂತೆ ಪಕ್ಷದ ಸದಸ್ಯರನ್ನು ಒತ್ತಾಯಿಸಿದ್ದಾರೆ ಎಂದು ಹೇಳತ್ತದೆ.
ಈ ಹೇಳಿಕೆ ಆನ್‌ಲೈನ್‌ನಲ್ಲಿ ಗಮನ ಸೆಳೆದಿದೆ, ಏಕೆಂದರೆ ಮುಖ್ಯವಾಗಿ ಟಿಡಿಪಿಯು ಜನಸೇನಾ ಪಕ್ಷ (ಜೆಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗೆ ಮೈತ್ರಿ ಮಾಡಿಕೊಂಡಿದೆ ಹಾಗು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ವೈಎಸ್‌ಆರ್‌ಸಿಪಿ ವಿರುದ್ಧ ಸ್ಪರ್ಧಿಸುತ್ತಿದೆ.
ಚಂದ್ರಬಾಬು ನಾಯ್ಡು ಅವರ ಆಪಾದಿತ ನಿರ್ಧಾರದ ಬಗ್ಗೆ ಟೀಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ, ಅಂತಹ ಪೋಷ್ಟ್ ಗಳ ಆರ್ಕೈವ್ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದ್ದು, ಎಬಿಎನ್ ಆಂಧ್ರಜ್ಯೋತಿ ಪ್ರಸಾರ ಮಾಡಿದ ಅಧಿಕೃತ ಸುದ್ದಿ ಅಲ್ಲ ಎಂಬುದು ಬೆಳಕಿಗೆ ಬಂದಿದೆ. ಅಂತಹ ಯಾವುದೇ ಸುದ್ದಿಯನ್ನು ಚಾನೆಲ್ ಪ್ರಸಾರ ಮಾಡಿಲ್ಲ.
ನಾವು ಕಂಡುಹಿಡಿದದ್ದು ಹೇಗೆ?
ತನಿಖೆಯ ನಂತರ, ವೈಎಸ್ ಶರ್ಮಿಳಾಗೆ ನಾಯ್ಡು ಅವರ ಬೆಂಬಲವನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಕಂಡುಬಂದಿಲ್ಲ. ಹೆಚ್ಚುವರಿಯಾಗಿ, ಕಡಪದಿಂದ ಟಿಡಿಪಿ ಅಭ್ಯರ್ಥಿಯ ಹೆಸರನ್ನು ತಪ್ಪಾಗಿ ವೀಡಿಯೋದಲ್ಲಿ ಬರೆಯಲಾಗಿದ್ದು, ಕ್ಲಿಪ್‌ನಲ್ಲಿನ ಈ ವ್ಯತ್ಯಾಸಗಳು ಅದು ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.
ಕ್ಲಿಪ್‌ನ ಟೆಂಪ್ಲೇಟ್ ಮತ್ತು ಹಿನ್ನೆಲೆ ಸಂಗೀತವು ಎಬಿಎನ್ ಆಂಧ್ರಜ್ಯೋತಿಯಿಂದ ಬಂದಿದ್ದು, 'ಬ್ರೇಕಿಂಗ್ ನ್ಯೂಸ್' ವಿಭಾಗದಲ್ಲಿ ಅದರ ವಿಷಯಕ್ಕಾಗಿ ಬಳಸಲಾದ ಫಾಂಟ್ ವೈರಲ್ ಕ್ಲಿಪ್‌ಗಿಂತ ಭಿನ್ನವಾಗಿದೆ. ಸಾಮಾನ್ಯ ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿನ ಫಾಂಟ್ ವೈರಲ್ ಕ್ಲಿಪ್‌ನಲ್ಲಿರುವ ಫಾಂಟ್‌ಗಿಂತ ದಪ್ಪವಾಗಿರುತ್ತದೆ. ಅದೇ ರೀತಿ, ವೈರಲ್ ನ್ಯೂಸ್ ಕ್ಲಿಪ್‌ಗೆ ಹೋಲಿಸಿದರೆ ವಾಹಿನಿಯ ಸಾಮಾನ್ಯ ಸುದ್ದಿ ತುಣುಕುಗಳಲ್ಲಿನ 'ಎಬಿಎನ್' ವಾಟರ್‌ಮಾರ್ಕ್ ದಪ್ಪವಾಗಿರುತ್ತದೆ ಮತ್ತು ಪ್ರಕಾಶಮಾನವಾಗಿರುತ್ತದೆ.
ವೈರಲ್ ಟೆಂಪ್ಲೇಟ್ ಮತ್ತು ಮೂಲ ಎಬಿಎನ್ ಟೆಂಪ್ಲೇಟ್ ನಡುವಿನ ಹೋಲಿಕೆ .
(ಮೂಲ: ಎಕ್ಸ್ /ಎಬಿಎನ್ ಆಂಧ್ರಜ್ಯೋತಿ/ಸ್ಕ್ರೀನ್‌ಶಾಟ್‌ಗಳು)
ಎಬಿಎನ್ ಆಂಧ್ರಜ್ಯೋತಿ ಅವರು ಏಪ್ರಿಲ್ ೭, ೨೦೨೪ ರಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ, ಅವರು ಅಂತಹ ಸುದ್ದಿಗಳನ್ನು ಪ್ರಸಾರ ಮಾಡಿಲ್ಲ ಎಂದು ಖಚಿತಪಡಿಸಿದರು, ವೈರಲ್ ಕ್ಲಿಪ್ ಅನ್ನು ಫೇಕ್ ಎಂದು ಖಂಡಿಸಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಎಡಿಟ್ ಮಾಡಿದ ವೀಡಿಯೋ ಜೊತೆಗೆ, ನಾಯ್ಡು ಅವರ ಹೆಸರಿನಲ್ಲಿ ಪತ್ರ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು, ಶರ್ಮಿಳಾಗೆ ಟಿಡಿಪಿಯ ಬೆಂಬಲದ ಹೇಳಿಕೆಯನ್ನು ಪುನರುಚ್ಚರಿಸಲಾಗಿತ್ತು. ಆದರೆ, ಏಪ್ರಿಲ್ ೭ ರಂದು ಟಿಡಿಪಿ ಈ ಪತ್ರವನ್ನು ಫೇಕ್ ಎಂದು ಅಧಿಕೃತವಾಗಿ ನಿರಾಕರಿಸಿತು.
ಈ ಘಟನೆಯು ಪ್ರತ್ಯೇಕವಾಗಿಲ್ಲ, ಏಕೆಂದರೆ ನಾಯ್ಡು ಅವರು ಬರೆದಿದ್ದಾರೆ ಎಂದು ಹೇಳಲಾದ ಸುಳ್ಳು ಸುದ್ದಿ ತುಣುಕುಗಳು ಮತ್ತು ನಕಲಿ ಪತ್ರಗಳ ಇದೇ ರೀತಿಯ ನಿದರ್ಶನಗಳು ಈ ಹಿಂದೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗಿವೆ. ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ಇಂತಹ ಹಲವಾರು ಹೇಳಿಕೆಗಳನ್ನು ನಿರಾಕರಿಸಿದೆ, ಅದನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.
ತೀರ್ಪು
ಎಬಿಎನ್ ಆಂಧ್ರಜ್ಯೋತಿ ಚಾನೆಲ್‌ನ ಎಡಿಟ್ ಮಾಡಿದ ಸುದ್ದಿ ಕ್ಲಿಪ್ ಅನ್ನು ಬಳಸಿಕೊಂಡು ಟಿಡಿಪಿಯು ಕಡಪ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೈಎಸ್ ಶರ್ಮಿಳಾ ಅವರನ್ನು ಪರೋಕ್ಷವಾಗಿ ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.