ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ
ಏಪ್ರಿಲ್ 30 2024
ಸಿಎಂ ಸಿದ್ದರಾಮಯ್ಯ, ರಾಜ್ಯ ಸಚಿವರಾದ ಎಚ್‌ಕೆ ಪಾಟೀಲ್, ಲಕ್ಷಿ ಹೆಬ್ಬಾಳ್ಕರ್, ಸಂತೋಷ್ ಲಾಡ್ ಮತ್ತು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ನೇಹಾ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಹೇಳಿಕೆ ಏನು?
ಕರ್ನಾಟಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖ್ಯಸ್ಥ ಬಿ.ವೈ ವಿಜಯೇಂದ್ರ ಅವರು ನೇಹಾ ಹಿರೇಮಠ್ ಅವರ ತಂದೆ ನಿರಂಜನ್ ಹಿರೇಮಠ್ ಅವರನ್ನು ಭೇಟಿ ಮಾಡಿದ ೩೧ ಸೆಕೆಂಡುಗಳ ವೀಡಿಯೋವನ್ನು, ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಹುಬ್ಬಳ್ಳಿ ಧಾರವಾಡದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಿರೇಮಠ್ ಅವರ ಪುತ್ರಿ ಹತ್ಯೆಯಾದ ನಂತರ ಕಾಂಗ್ರೆಸ್ ಪಕ್ಷದ ಯಾರೂ ಅವರನ್ನು ಅಥವಾ ಅವರ ಕುಟುಂಬವನ್ನು ಭೇಟಿ ಮಾಡಿಲ್ಲ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ .
೨೧ ವರ್ಷದ ಯುವತಿಯನ್ನು ಆಕೆಯ ಮಾಜಿ ಸಹಪಾಠಿ ಫಯಾಜ್ ಖೋಡುನಾಯಕ್ ಅವರು ಏಪ್ರಿಲ್ ೧೮, ೨೦೨೪ ರಂದು ಇರಿದು ಕೊಂದಿದ್ದಾರೆ. ಖೋಡುನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದು, ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಿರೇಮಠ ಅವರ ತಂದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೌನ್ಸಿಲರ್ ಆಗಿದ್ದಾರೆ.
"ಜೆಪಿ ನಡ್ಡಾ ಜಿ ನಂತರ ಕರ್ನಾಟಕ ಬಿಜೆಪಿ ಮುಖ್ಯಸ್ಥ ವಿಜಯೇಂದ್ರ ಅವರು ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿದರು ಮತ್ತು ಅವರ ತಂದೆ ಮತ್ತು ಕಾಂಗ್ರೆಸ್ ಮುಖಂಡ ನಿರಂಜನ್ ಹಿರೇಮಠ್ ಅವರನ್ನು ಭೇಟಿ ಮಾಡಿದರು. ಇನ್ನೂ ಕಾಂಗ್ರೆಸ್‌ನ ಒಬ್ಬ ವ್ಯಕ್ತಿಯೂ ನೇಹಾ ಮನೆಗೆ ಭೇಟಿ ನೀಡಿಲ್ಲ. ಔಪಚಾರಿಕತೆಗಾಗಿಯೂ ಅಲ್ಲ. ಅತ್ಯುನ್ನತ ಮಟ್ಟದಲ್ಲಿ ಮುಸ್ಲಿಂ ತುಷ್ಟೀಕರಣ. ಅವಮಾನ! (sic)" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ.
ಈ ಕಥೆಯನ್ನು ಬರೆಯುವ ಸಮಯದಲ್ಲಿ ಅಂತಹ ಒಂದು ಪೋಷ್ಟ್ ಸುಮಾರು ೧೧೩,೬೦೦ ವೀಕ್ಷಣೆಗಳನ್ನು ಗಳಿಸಿದೆ.
ಎಕ್ಸ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಈ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆದರೆ, ಹೇಳಿಕೆ ನಿಜವಲ್ಲ. ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಏಪ್ರಿಲ್ ೧೯ ರಂದು ಮೃತಳ ತಂದೆಯೊಂದಿಗೆ ಅಂತಿಮ ವಿಧಿವಿಧಾನದ ವೇಳೆ ಕಾಣಿಸಿಕೊಂಡಿದ್ದರು. ಕರ್ನಾಟಕ ಮುಖ್ಯಮಂತ್ರಿ (ಸಿಎಂ) ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಸಚಿವರಾದ ಎಚ್‌ಕೆ ಪಾಟೀಲ್ ಮತ್ತು ಲಕ್ಷಿ ಹೆಬ್ಬಾಳ್ಕರ್ ಕೂಡ ಕುಟುಂಬವನ್ನು ಭೇಟಿ ಮಾಡಿದರು.
ಕಾಂಗ್ರೆಸ್ ಭೇಟಿ
ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಅವರು ಏಪ್ರಿಲ್ ೧೯ ರಂದು ಮೃತರ ತಂದೆಯ ಅಂತಿಮ ವಿಧಿವಿಧಾನದ ಸಮಯದಲ್ಲಿ ಅವರ ತಂದೆಯೊಂದಿಗೆ ಕಾಣಿಸಿಕೊಂಡಿದ್ದರು. ನ್ಯೂಸ್ ೧೮ ಕನ್ನಡದ ಯೂಟ್ಯೂಬ್ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಿರಂಜನ್ ಹಿರೇಮಠ್ ಜೊತೆ ಲಾಡ್ ಅನ್ನು ತೋರಿಸುತ್ತದೆ.
ನ್ಯೂಸ್ ೧೮ ಕನ್ನಡದ ಸುದ್ದಿ ವರದಿಯಿಂದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)
ಏಪ್ರಿಲ್ ೨೦ ರಂದು ಕಾಂಗ್ರೆಸ್ ಸದಸ್ಯೆ ಮತ್ತು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಿವಾಸಕ್ಕೆ ಕುಟುಂಬವನ್ನು ಭೇಟಿ ಮಾಡಿದರು. ಭೇಟಿ ವೇಳೆ ಹಿರೇಮಠ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಸದಸ್ಯೆ ಹಾಗೂ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಿರೇಮಠ್ ನಿವಾಸದಲ್ಲಿ ಸಂತಾಪ ಸೂಚಿಸುತ್ತಿರುವ ವಿಜಯ ಕರ್ನಾಟಕ ಸುದ್ದಿ ವರದಿಯ ಸ್ಕ್ರೀನ್ ಶಾಟ್. (ಮೂಲ: ವಿಜಯ ಕರ್ನಾಟಕ / ಸ್ಕ್ರೀನ್‌ಶಾಟ್)
ಅದೇ ದಿನ ಟಿವಿ೯ ಕನ್ನಡ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೆಬ್ಬಾಳ್ಕರ್ ಹಿರೇಮಠ್ ನಿವಾಸಕ್ಕೆ ಭೇಟಿ ನೀಡಿದ ಸುದ್ದಿ ವಿಭಾಗವನ್ನೂ ಪ್ರಸಾರ ಮಾಡಿತ್ತು. ಸಭೆಯ ನಂತರ, ನೇಹಾಗೆ ಸರಿಯಾದ ನ್ಯಾಯವನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ವ್ಯಕ್ತಪಡಿಸಿದರು. ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ ಮತ್ತು ತಾಯಿಯಾಗಿ ಅವರು ಘಟನೆಯನ್ನು ನಿಸ್ಸಂದಿಗ್ಧವಾಗಿ ಖಂಡಿಸುವುದಾಗಿ ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕಾನೂನು ಸಚಿವ ಎಚ್‌ಕೆ ಪಾಟೀಲ್ ಮತ್ತು ಇತರ ನಾಯಕರೊಂದಿಗೆ ಏಪ್ರಿಲ್ ೨೪ ರಂದು ಹಿರೇಮಠ್ ನಿವಾಸಕ್ಕೆ ಭೇಟಿ ನೀಡಿದ್ದರು. ಸುರ್ಜೇವಾಲಾ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಆರೋಪಿಗಳನ್ನು ಶೀಘ್ರವಾಗಿ ನ್ಯಾಯಾಂಗಕ್ಕೆ ತರಲಾಗುವುದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.
ಸುರ್ಜೆವಾಲಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಭೆಯ ದೃಶ್ಯಗಳನ್ನು ಪೋಷ್ಟ್ ಮಾಡಿದ್ದಾರೆ. (ಇಲ್ಲಿ ಆರ್ಕೈವ್ ಮಾಡಲಾಗಿದೆ)
೨೫ ರಂದು ಹುಬ್ಬಳ್ಳಿಯ ಬಿದನಾಳದಲ್ಲಿರುವ ಹಿರೇಮಠ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹಿರೇಮಠ್ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಭದ್ರತೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ತ್ವರಿತ ನ್ಯಾಯಾಂಗ ಪ್ರಕ್ರಿಯೆಗೆ ಒತ್ತಾಯಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೆಚ್ಚುವರಿಯಾಗಿ, ಸಿದ್ದರಾಮಯ್ಯ ಅವರ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ವೀಡಿಯೋವನ್ನು ಸುದ್ದಿ ಸಂಸ್ಥೆ ಪಿಟಿಐ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ದಿನ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಬಿಜೆಪಿ ಭೇಟಿ
ಏಪ್ರಿಲ್ ೨೧, ೨೦೨೪ ರಂದು, ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಹಿರೇಮಠ್ ಕುಟುಂಬವನ್ನು ಭೇಟಿ ಮಾಡಿದರು ಮತ್ತು ಸಿಬಿಐ ತನಿಖೆಗೆ ಶಿಫಾರಸು ಮಾಡಿದರು. ವೀಡಿಯೋವನ್ನು ANI ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು (ಇಲ್ಲಿ ಆರ್ಕೈವ್ ಮಾಡಲಾಗಿದೆ).
ಏಪ್ರಿಲ್ ೨೩ ರಂದು ಬಿಜೆಪಿ ಮುಖ್ಯಸ್ಥ ಬಿ.ವೈ. ವಿಜಯೇಂದ್ರ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದರು. ಪಬ್ಲಿಕ್ ಟಿವಿಯ ಸುದ್ದಿ ವಿಭಾಗ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವೈರಲ್ ವೀಡಿಯೋದಂತೆಯೇ ಆದರೆ ವಿಭಿನ್ನ ಕೋನದಿಂದ ದೃಶ್ಯಗಳನ್ನು ಒಳಗೊಂಡಿತ್ತು.
ಈ ಘಟನೆ ಕರ್ನಾಟಕದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಪೊಲೀಸ್ ತನಿಖೆಯಲ್ಲಿ ಹಿರೇಮಠ್ ಮತ್ತು ಖೋಡುನಾಯ್ಕ್ ನಡುವೆ ಸಂಬಂಧವಿತ್ತು, ಆದರೆ ಆಕೆಯ ಕುಟುಂಬ ಸದಸ್ಯರು ಆಕೆಗೆ ಅವನು ಕಿರುಕುಳ ನೀಡುತಿದ್ದನು ಮತ್ತು ಅವಳು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದಳು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕೊಲೆಯ ಹಿಂದಿನ ಉದ್ದೇಶವನ್ನು ವೈಯಕ್ತಿಕ ಕಾರಣಗಳಿಂದ ನೆಡೆದಿದೆ ಎಂದು ಆರೋಪಿಸಿದೆ, ಆದರೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಇದು "ಲವ್ ಜಿಹಾದ್" ಪ್ರಕರಣವಾಗಿದೆ ಎಂದು ಆರೋಪಿಸಿದೆ. "ಲವ್ ಜಿಹಾದ್," ಇದು ಬಲಪಂಥೀಯರಿಂದ ಜನಪ್ರಿಯಗೊಳಿಸಲ್ಪಟ್ಟ ಸಿದ್ಧಾಂತವಾಗಿದೆ, ಇದು ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಬಲೆಗೆ ಬೀಳಿಸುತ್ತಾರೆ ಪ್ರೀತಿಯ ನೆಪದಲ್ಲಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸುತ್ತಾರೆ ಎಂದು ಹೇಳಲಾಗಿದೆ.
ತೀರ್ಪು
ಏಪ್ರಿಲ್ ೧೮ ರಂದು ನೇಹಾ ಹಿರೇಮಠ್ ಅವರನ್ನು ಮಾರಣಾಂತಿಕವಾಗಿ ಇರಿದ ನಂತರ ಕಾಂಗ್ರೆಸ್ ನಾಯಕರು ಅವರ ಕುಟುಂಬವನ್ನು ಭೇಟಿ ಮಾಡಿದರು. ಬಿಜೆಪಿ ನಾಯಕರು ಕುಟುಂಬವನ್ನು ಭೇಟಿ ಮಾಡುವ ಮೊದಲು ಕೆಲವು ಭೇಟಿಗಳು ನೆಡೆದಿವೆ, ಕೆಲವು ನಂತರ ನೆಡೆದಿವೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.