ಮೂಲಕ: ರಜಿನಿ ಕೆ.ಜಿ
ಜೂನ್ 20 2024
ವೈರಲ್ ಆಗಿರುವ ವೀಡಿಯೋದಲ್ಲಿ ನಟ ದುನಿಯಾ ವಿಜಯ್ ಅವರು ಪತ್ರಕರ್ತ ಮತ್ತು ಲೇಖಕ ರವಿ ಬೆಳಗೆರೆ ಬಗ್ಗೆ ಮಾತನಾಡಿದ್ದಾರೆಯೇ ಹೊರತು ದರ್ಶನ್ ತೂಗುದೀಪ ಅವರ ಬಗ್ಗೆ ಅಲ್ಲ.
ಹೇಳಿಕೆ ಏನು?
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕನ್ನಡ ಚಿತ್ರರಂಗದ ನಟ ದುನಿಯಾ ವಿಜಯ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ೫೯ ಸೆಕೆಂಡುಗಳ ವೀಡಿಯೋವನ್ನು ಪ್ರಸಾರ ಮಾಡಲಾಗಿದೆ.
ವೀಡಿಯೋದಲ್ಲಿ ವರದಿಗಾರ, ವಿಜಯ್ ವಿರುದ್ಧ ಮಾಡಿದ ವೈಯಕ್ತಿಕ ಕಾಮೆಂಟ್‌ಗಳ ಬಗ್ಗೆ ಕೇಳುತ್ತಾನೆ. ವಿಜಯ್ ಪ್ರತಿಕ್ರಿಯಿಸಿ, ಶೂಟಿಂಗ್‌ನಲ್ಲಿ ನಿರತರಾಗಿದ್ದರಿಂದ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ನಂತರ ಅವರು ದರ್ಶನ್ ಅವರನ್ನು ಉಲ್ಲೇಖಿಸಿ, "ಅವರಿಗೆ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿದ್ದಾರೆ. ಅವನಿಗೆ ಆತ್ಮಸಾಕ್ಷಿಯ ಕೊರತೆಯಿದೆ...," ಆಕ್ಷೇಪಾರ್ಹ ಭಾಷೆಯ ನಂತರ, ಅವರ ಕುಟುಂಬ ಅಥವಾ ವೈಯಕ್ತಿಕ ಜೀವನವನ್ನು ಚರ್ಚಿಸುವುದರ ವಿರುದ್ಧ ಎಚ್ಚರಿಕೆ ನೀಡುತ್ತಾರೆ.
ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಬಳಕೆದಾರರು “ಜಸ್ಟಿಸ್ ಫಾರ್ ರೇಣುಕಾಸ್ವಾಮಿ #BoycottCriminalDarshan #HandOverMurderCaseToCBI” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಯಲ್ಲಿರುವ ಪಠ್ಯವು "ದರ್ಶನ್ ಹಾಗೂ ಅವರ ಕಚಾಡ ಫ್ಯಾನ್ಸ್ ಗಳಿಗೆ ಹಿಗ್ಗಮುಗ್ಗ ಜಾಡಿಸಿದ ದುನಿಯಾ ವಿಜಯ್" ಎಂದು ಬರೆಯಲಾಗಿದೆ. ಪೋಷ್ಟ್ ೩೦,೮೦೦ ವೀಕ್ಷಣೆಗಳನ್ನು ಮತ್ತು ೬೦೦ ಲೈಕ್ ಗಳನ್ನು ಹೊಂದಿದೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ನಟನ ಅಭಿಮಾನಿ ಎಂದು ಹೇಳಲಾದ ರೇಣುಕಾಸ್ವಾಮಿ ಹತ್ಯೆಯ ಆರೋಪಿ ದರ್ಶನ್ ಬಂಧನದ ನಂತರ #ಜಸ್ಟಿಸ್ ಫಾರ್ ರೇಣುಕಾಸ್ವಾಮಿ ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹಂಚಿಕೊಳ್ಳಲಾಯಿತು. ಹತ್ಯೆಗೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ೧೭ ವ್ಯಕ್ತಿಗಳನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ದಾಖಲೆಗಳು ಮತ್ತು ಇಂಡಿಯಾ ಟುಡೇ ವರದಿಯ ಪ್ರಕಾರ, ದರ್ಶನ್ ಅವರ ಸ್ನೇಹಿತೆ ಮತ್ತು ಅವರ ಸಂಗಾತಿ ಎಂದು ಹೇಳಲಾಗಿರುವ ನಟಿ ಪವಿತ್ರ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲ್ಲಲಾಗಿದೆ. ಪ್ರಕರಣವು ತನಿಖೆಯ ಹಂತದಲ್ಲಿದೆ.
ದರ್ಶನ್ ಬಂಧನವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೊಲೆ ಪ್ರಕರಣದಲ್ಲಿ ನ್ಯಾಯಯುತ ತನಿಖೆ ಮತ್ತು ನ್ಯಾಯಕ್ಕಾಗಿ ಬೇಡಿಕೆಗಳು ಹೆಚ್ಚಾದವು. ಅಂದಿನಿಂದ ವಿಜಯ್ ಅವರ ವೀಡಿಯೋವನ್ನು ಪ್ರಸಾರ ಮಾಡಲಾಗಿದ್ದು, ದರ್ಶನ್ ಅವರ ಕ್ರಮವನ್ನು ಖಂಡಿಸಲಾಗಿದೆ.
ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ವಿಜಯ್ ಅವರ ವೀಡಿಯೋವನ್ನು ಎಡಿಟ್ ಮಾಡಲಾಗಿದೆ.
ವಾಸ್ತವಾಂಶಗಳು ಇಲ್ಲಿವೆ
ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ೦:೦೬ ಕ್ಕೆ, ವಿಜಯ್ ಅವರು ದರ್ಶನ್ ಅವರ ಹೆಸರನ್ನು ಉಲ್ಲೇಖಿಸಿದಾಗ, ಅವರ ತುಟಿ ಚಲನೆಗಳು ಆಡಿಯೊಗೆ ಹೊಂದಿಕೆಯಾಗುತ್ತಿಲ್ಲ, ಸಂಭಾವ್ಯ ಎಡಿಟ್ ಅನ್ನು ಸೂಚಿಸುತ್ತವೆ.
ರಿವರ್ಸ್ ಇಮೇಜ್ ಸರ್ಚ್ ಆಗಸ್ಟ್ ೨೩, ೨೦೧೯ ರಂದು ಯೂಟ್ಯೂಬ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕನ್ನಡ ಸುದ್ದಿ ವಾಹಿನಿ ಟಿವಿ೫ ಸ್ಯಾಂಡಲ್‌ವುಡ್ ಬಿಡುಗಡೆ ಮಾಡಿದ ವೀಡಿಯೋದ ದೀರ್ಘ ಆವೃತ್ತಿಗೆ ಕಾರಣವಾಯಿತು. ಅದರ ಟೈಟಲ್ ಹೀಗೆದೆ, “ರವಿ ಬೆಳಗೆರೆ ಬಗ್ಗೆ ದುನಿಯಾ ವಿಜಯ್ ಶಾಕಿಂಗ್ ರಿಯಾಕ್ಷನ್ | ದುನಿಯಾ ವಿಜಯ್ | ರವಿ ಬೆಳಗೆರೆ | ಟಿವಿ೫ ಸ್ಯಾಂಡಲ್‌ವುಡ್.” ವೀಡಿಯೋ ೦:೧೬ ಕ್ಕೆ ಪ್ರಾರಂಭವಾಗುತ್ತದೆ, ಅಲ್ಲಿ ವರದಿಗಾರ, ವಿಜಯ್ ಅವರ ಕುಟುಂಬದ ವಿಷಯಗಳ ಬಗ್ಗೆ ಕಾಮೆಂಟ್‌ಗಳ ಬಗ್ಗೆ ಕೇಳುತ್ತಾರೆ. ೦:೨೧ ಕ್ಕೆ ವಿಜಯ್ ಪ್ರತಿಕ್ರಿಯಿಸಿದರು, “ಯಾರು, ರವಿ ಬೆಳಗೆರೆ? ಅವನಿಗೆ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿದ್ದಾರೆ. ” ವೈರಲ್ ಕ್ಲಿಪ್ ೦:೧೬ ರಿಂದ ೧:೨೬ ರವರೆಗೆ ಕಾಣಿಸಿಕೊಳ್ಳುತ್ತದೆ, ‘ರವಿ ಬೆಳಗೆರೆ’ ಬದಲಿಗೆ ದರ್ಶನ್’ ಪದ ಸೇರಿಸಲಾಗಿದೆ.
ನ್ಯೂಸ್‌ಫಸ್ಟ್ ಕನ್ನಡ ಕೂಡ ವಿಜಯ್ ಅವರ ಹೇಳಿಕೆಗಳನ್ನು ವರದಿ ಮಾಡಿದೆ. ಅವರು ಪತ್ರಕರ್ತ ಮತ್ತು ಲೇಖಕ ರವಿ ಬೆಳಗೆರೆ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ, ದರ್ಶನ್ ಅಲ್ಲ ಎಂದು ವರದಿ ಮಾಡಿದೆ.
ಮನರಂಜನಾ ಪೋರ್ಟಲ್ ಕನ್ನಡ ಫಿಲ್ಮಿ ಬೀಟ್ ಪ್ರಕಾರ, ಆಗಸ್ಟ್ ೨೩, ೨೦೧೯ ರಂದು ಕನ್ನಡ ಚಲನಚಿತ್ರ 'ಬಡವ ರಾಸ್ಕಲ್' ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಬೆಳಗೆರೆ ಅವರನ್ನು ಉದ್ದೇಶಿಸಿ ಮಾತನಾಡಿದರು.
ಮಾಧ್ಯಮ ಸಂವಾದದ ವೇಳೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯ್, ರವಿ ಬೆಳಗೆರೆ ಇನ್ನೂ ಬದುಕಿದ್ದಾರಾ? ಅವನಿಗೆ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿದ್ದಾರೆ.” ವಿಜಯ್ ಅಭಿನಯದ ‘ಭೀಮ ತೀರದಲಿ’ ಚಿತ್ರದ ನಿರ್ಮಾಣದ ಸಮಯದಲ್ಲಿಯೇ ವಿಜಯ್ ಮತ್ತು ಬೆಳಗೆರೆ ನಡುವೆ ಮಾತಿನ ಚಕಮಕಿ ಪ್ರಾರಂಭವಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ, ಚಿತ್ರದ ಕಥಾಹಂದರವನ್ನು ತಮ್ಮ ‘ಭೀಮ ತೀರದ ಹಂತಕರು’ ಪುಸ್ತಕದಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಬೆಳಗೆರೆ ಆರೋಪಿಸಿದರು.
ವಿಜಯ್ ಹೇಳಿಕೆಗಳು ಬೆಳಗೆರೆ ಅವರನ್ನು ಉದ್ದೇಶಿಸಿವೆಯೇ ಹೊರತು ದರ್ಶನ್‌ಗೆ ಅಲ್ಲ ಎಂದು ಸಾಕ್ಷ್ಯಗಳು ದೃಢಪಡಿಸುತ್ತವೆ.
ತೀರ್ಪು
ದುನಿಯಾ ವಿಜಯ್ ಪತ್ರಕರ್ತ ರವಿ ಬೆಳಗೆರೆ ಅವರನ್ನು ನಿಂದಿಸುತ್ತಿರುವ ಐದು ವರ್ಷಗಳ ಹಳೆಯ ವೀಡಿಯೋವನ್ನು ನಟ ದರ್ಶನ್ ತೂಗುದೀಪ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ತಪ್ಪಾಗಿ ಎಡಿಟ್ ಮಾಡಲಾಗಿದೆ.
Read this fact-check in English here