ಮೂಲಕ: ಇಶಿತಾ ಗೋಯಲ್ ಜೆ
ಮೇ 2 2024
ಮೋದಿಯವರು ಈ ಭಾಷಣೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಪಾರ್ಟಿಯನ್ನು ಉಲ್ಲೇಖಿಸಿದ್ದಾರೆ, ಕರ್ನಾಟಕದ ಜನರನ್ನಲ್ಲ, ಎಂದು ವೀಡಿಯೋದ ಪೂರ್ಣ ಆವೃತ್ತಿಯು ತೋರಿಸುತ್ತದೆ.
ಹೇಳಿಕೆ ಏನು?
ಲೋಕಸಭಾ ಚುನಾವಣೆಗಾಗಿ ನಡೆಯುತ್ತಿರುವ ಪ್ರಚಾರದ ಭಾಗವಾಗಿ, ಏಪ್ರಿಲ್ ೨೯, ೨೦೨೪ ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ದಾವಣಗೆರೆ ಮತ್ತು ಬೆಳಗಾವಿಯಲ್ಲಿ ರ‍್ಯಾಲಿಯನ್ನು ನಡೆಸಿದರು.
ಈ ಸಭೆಗಳಲ್ಲಿ ಮೋದಿಯವರು ಮಾಡಿದ ಭಾಷಣದ ಕ್ಲಿಪ್ ಒಂದು ವೈರಲ್ ಆಗಿದ್ದು, ಪ್ರಧಾನಿಯವರು ಕರ್ನಾಟಕದ ಜನರನ್ನು 'ಪಾಪಿಗಳು' ಎಂದು ಕರೆದಿದ್ದಾರೆ ಮತ್ತು ಅವರನ್ನು ಈ ಚುನಾವಣೆಯಲ್ಲಿ ಶಿಕ್ಷಿಸಬೇಕು ಎಂಬ ಆರೋಪದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಕ್ಲಿಪ್‌ನಲ್ಲಿ, ಮೋದಿಯವರು ಹಿಂದಿಯಲ್ಲಿ ಹೀಗೆ ಹೇಳುವುದನ್ನು ಕೇಳಬಹುದು, "ಈ ಕರ್ನಾಟಕದ ಜನರು ಮಾಡಿದ ಪಾಪಗಳಿಗೆ ನೀವು ಈ ಚುನಾವಣೆಯಲ್ಲಿ ಶಿಕ್ಷೆ ನೀಡಬೇಕು ಮತ್ತು ಮುಂಬರುವ ವರ್ಷಗಳಲ್ಲಿ ಮೋದಿ ನಿಮಗೆ ಗ್ಯಾರಂಟಿ ನೀಡುತ್ತಾರೆ."
ಈ ಕ್ಲಿಪ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, "ಕನ್ನಡಿಗರು ಬಿಜೆಪಿಗೆ ಮತ ಹಾಕದಿದ್ದ ಕಾರಣ, ಪ್ರಧಾನಿ ಮೋದಿಯವರು ಕನ್ನಡಿಗರು ಪಾಪ ಮಾಡಿದ್ದಾರೆಂದು ಭಾವಿಸುತ್ತಾರೆ. ಅವರು ಕನ್ನಡಿಗರನ್ನು ಏಕೆ ದ್ವೇಷಿಸುತ್ತಾರೆ?" ಎಂಬ ಶೀರ್ಷಿಕೆಯನ್ನು ಹೊಂದಿದೆ.
ಕೇರಳದ ಕಾಂಗ್ರೆಸ್ ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ವೈರಲ್ ವೀಡಿಯೋವನ್ನು ಪೋಷ್ಟ್ ಮಾಡಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಅದರ ಶೀರ್ಷಿಕೆ, "ಮೋದಿಯವರು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಅವರು ತಮ್ಮದೇ ಪೋಷ್ಟ್ ನಲ್ಲಿ ಗೋಲು ಮೇಲೆ ಗೋಲನ್ನು ಗಳಿಸಿದ್ದಾರೆ. ಅವರು ಈಗ ಕರ್ನಾಟಕದ ಜನರನ್ನು ಪಾಪಿಗಳು ಎಂದು ಕರೆದಿದ್ದಾರೆ. ಕರ್ನಾಟಕ ಇಂತಹ ಅವಮಾನಗಳಿಗೆ ಗಟ್ಟಿಯಾದ ಕಪಾಳಮೋಕ್ಷದಿಂದ ಪ್ರತಿಕ್ರಿಯಿಸಲು ತಿಳಿದಿದೆ. ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗುವುದು," ಎಂದು ಹೇಳಿಕೊಂಡಿದೆ.
ಕರ್ನಾಟಕದ ಐಟಿ/ಬಿಟಿ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರು ಈ ಹೇಳಿಕೆಯನ್ನು ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ (ಆರ್ಕೈವ್ ಇಲ್ಲಿದೆ), ಮತ್ತು "ಕನ್ನಡಿಗರು ಪಾಪ ಮಾಡಿದವರು“ ಎನ್ನುವ ಪ್ರಧಾನಿ ಮೋದಿಯವರೇ, ಕನ್ನಡಿಗರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೂ ಸಹ ಈ ವೀಡಿಯೋವನ್ನು ಎಕ್ಸ್ ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಶೇರ್ ಮಾಡಿದ್ದಾರೆ ಹಾಗೂ ಹೀಗೆ ಬರೆದಿದ್ದಾರೆ, "ಪ್ರಧಾನಿ ಮೋದಿ ಅವರ ಈ ಹೇಳಿಕೆ ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿನ ಮುಜುಗರವೋ? ಅಥವಾ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಬಿಜೆಪಿಯನ್ನು ತಿರಸ್ಕರಿಸುತ್ತಿದ್ದಾರೆ ಎನ್ನುವ ಹತಾಶೆಯೋ?"
ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಸತ್ಯ ಏನು?
ಮೋದಿಯವರ ಏಪ್ರಿಲ್ ೨೮ರ ಸಂಪೂರ್ಣ ಭಾಷಣವನ್ನು ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಿದ್ದನ್ನು ನಾವು ಕಂಡುಕೊಂಡೆವು, ಮತ್ತು ಅದರ ಶೀರ್ಷಿಕೆ ಹೀಗಿದೆ, ‘ಪಿಎಂ ಮೋದಿ ಲೈವ್ | ಕರ್ನಾಟಕದ ಬೆಳಗಾವಿಯಲ್ಲಿ ಸಾರ್ವಜನಿಕ ಸಭೆ | ಲೋಕಸಭೆ ಚುನಾವಣೆ ೨೦೨೪.’ ವೀಡಿಯೋದ ೩೨:೦೦ ಟೈಮ್‌ಸ್ಟ್ಯಾಂಪ್‌ನಲ್ಲಿ ಮೋದಿಯವರ ಈ ಹೇಳಿಕೆಯು ಕೇಳಿದ್ದರೂ, ವೈರಲ್ ಕ್ಲಿಪ್ ನೊಂದಿಗೆ ಶೇರ್ ಮಾಡಲಾಗುತ್ತಿರುವ ಸಂದರ್ಭವು ತಪ್ಪಾಗಿದೆ.
ನಿಜವಾದ ಸಂದರ್ಭ ಏನು?
ಸುಮಾರು ೨೯:೦೦ ರಿಂದ ವೀಡಿಯೋದಲ್ಲಿ, ಮೋದಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ೩೧:೦೪ ನಿಮಿಷ ಮಾರ್ಕ್‌ನಲ್ಲಿ ಟೀಕಿಸುವ ಮೊದಲು ಬಿಜೆಪಿ ಆಡಳಿತದಲ್ಲಿ ಭಾರತೀಯ ರೈತರು ಅನುಭವಿಸುತ್ತಿರುವ ವಿವಿಧ ಪ್ರಯೋಜನಗಳ ಬಗ್ಗೆ ಮಾತನಾಡಿದರು. ‘ಇಲ್ಲಿನ ರೈತರಿಗೆ ಕಾಂಗ್ರೆಸ್ ಮಾಡಿರುವ ದ್ರೋಹ ದೊಡ್ಡ ಪಾಪ’ ಎಂದು ಕಿಡಿಕಾರಿದರು. ಸ್ಪಷ್ಟವಾಗಿ, ‘ಇಲ್ಲಿ’ ಎಂದು ಹೇಳುವ ಮೂಲಕ ಪ್ರಧಾನಿ ಕರ್ನಾಟಕವನ್ನು ಉಲ್ಲೇಖಿಸುತ್ತಿದ್ದರು.
"ಇಲ್ಲಿ ಬಿಜೆಪಿ ಆಡಳಿತ ಇದ್ದಾಗ ರೈತರ ಖಾತೆಗೆ ೧೦ ಸಾವಿರ ರೂಪಾಯಿ ಜಮಾ ಆಗುತ್ತಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ೪೦೦೦ ರೂಪಾಯಿ ನೀಡುವುದನ್ನು ನಿಲ್ಲಿಸಿತು. ಅವರು ತಮ್ಮ ಮತವನ್ನು ಭದ್ರಪಡಿಸುವಲ್ಲಿ ಯಶಸ್ವಿಯಾದ ನಂತರ, ಅವರು ರೈತರು ಮತ್ತು ಅವರ ಕೆಲಸದ ಬಗ್ಗೆ ಕಾಳಜಿ ವಹಿಸುವುದನ್ನು ನಿಲ್ಲಿಸಿದರು. ಉಳಿದ ಆರು ಸಾವಿರವನ್ನು ಮೋದಿ ಸರ್ಕಾರ ಕಳುಹಿಸುತ್ತದೆ, ಅದನ್ನು ರೈತರು ಸ್ವೀಕರಿಸುತ್ತಾರೆ. ಇಲ್ಲಿ ಕೊಟ್ಟ ಹಣದ ಭಾಗವನ್ನು ಅವರು ಕಡಿತಗೊಳಿಸಿದರು," ಎಂದು ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಹಣವನ್ನು ನೀಡುವುದಾಗಿ ಮೋದಿಯವರು ಭರವಸೆ ನೀಡಿದರು.
ಈ ಮೇಲಿನ ಹೇಳಿಕೆಯನ್ನು ಉಲ್ಲೇಖಿಸಿ ಮೋದಿ, "ಈ ಚುನಾವಣೆಯಲ್ಲಿ ಈ ಕರ್ನಾಟಕದವರು ಮಾಡಿದ ಪಾಪಗಳಿಗೆ ನೀವು ಶಿಕ್ಷೆ ನೀಡಬೇಕು ಮತ್ತು ದೆಹಲಿಯಿಂದ ಕಳುಹಿಸಲಾದ ಯಾವುದೇ ಸೌಲಭ್ಯವು ಮುಂದಿನ ವರ್ಷಗಳಲ್ಲಿ ಮುಂದುವರಿಯುತ್ತದೆ ಎಂದು ಮೋದಿ ನಿಮಗೆ ಭರವಸೆ ನೀಡುತ್ತಾರೆ" ಎಂದು ಹೇಳಿದರು.
೩೧:೦೦ ನಿಮಿಷಗಳ ನಂತರದ ಭಾಷಣದ ಸಂಪೂರ್ಣ ಭಾಗವನ್ನು ಸರಿಯಾದ ಸಂದರ್ಭಕ್ಕಾಗಿ ಓದಿದಾಗ ಮೋದಿ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು 'ಕರ್ನಾಟಕ ವಾಲೋನ್' ಎಂದು ಉಲ್ಲೇಖಿಸಿ ಟೀಕಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಆಗಸ್ಟ್ ೧೦, ೨೦೨೩ ರ ಡೆಕ್ಕನ್ ಹೆರಾಲ್ಡ್ ವರದಿಯು, 'ರೈತರಿಗೆ ವಾರ್ಷಿಕ ೪,೦೦೦ ರೂಪಾಯಿ ಪಾವತಿಗಳನ್ನು ಪುನರಾರಂಭಿಸಿ: ಕರ್ನಾಟಕ ಸರ್ಕಾರಕ್ಕೆ ಬಿಜೆಪಿ' ಎಂಬ ತಲೆಬರಹವನ್ನು ಹೊಂದಿದೆ. ಮೋದಿ ಅವರು 'ಕಾಂಗ್ರೆಸ್ ರೈತರಿಗೆ ೪೦೦೦ ರೂಪಾಯಿಗಳನ್ನು ನಿಲ್ಲಿಸಿದೆ' ಎಂದು ಉಲ್ಲೇಖಿಸುವಾಗ ಅವರು ಕರ್ನಾಟಕದ ಬಗ್ಗೆ ಮಾತನಾಡಿದ್ದರು ಎಂದು ಇದು ಖಚಿತಪಡಿಸುತ್ತದೆ. ಈ ವಿಷಯವು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿಯಿಂದ ದೀರ್ಘಕಾಲದ ಟೀಕೆಯಾಗಿದೆ ಎಂದು ವರದಿ ದೃಢಪಡಿಸುತ್ತದೆ.
ಮೋದಿಯವರ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಭಾಷಣದ ಪ್ರತಿಲೇಖನವು, “ಈ ಚುನಾವಣೆಯಲ್ಲಿ ಮಾಡಿದ ಪಾಪಗಳಿಗೆ ಈ ಕಾಂಗ್ರೆಸ್ ವ್ಯಕ್ತಿಗಳಿಗೆ ಶಿಕ್ಷೆಯಾಗಬೇಕು” ಎಂದು ಅದು ಓದುತ್ತದೆ.
ಪ್ರತಿಲೇಖನದ ಸ್ಕ್ರೀನ್‌ಶಾಟ್. (ಮೂಲ: ನರೇಂದ್ರ ಮೋದಿ ವೆಬ್‌ಸೈಟ್/ಸ್ಕ್ರೀನ್‌ಶಾಟ್)
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂದರೇನು?
ಪಿಎಂ ಕಿಸಾನ್- ಕೇಂದ್ರ ವಲಯದ ಯೋಜನೆಯಾಗಿದ್ದು, ಭಾರತ ಸರ್ಕಾರವು ಸಂಪೂರ್ಣವಾಗಿ ಹಣವನ್ನು ನೀಡುತ್ತದೆ. ವಿವಿಧ ಸಾಮಗ್ರಿಗಳನ್ನು ಸಂಗ್ರಹಿಸಲು ಸಹಾಯ ಮಾಡುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರ (SMFs) ಹಣಕಾಸಿನ ಅಗತ್ಯಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು ಪ್ರತಿ ಬೆಳೆ ಚಕ್ರದ ಕೊನೆಯಲ್ಲಿ ನಿರೀಕ್ಷಿತ ಕೃಷಿ ಆದಾಯದೊಂದಿಗೆ ಹೊಂದಿಕೆಯಾಗುವ ಅತ್ಯುತ್ತಮ ಬೆಳೆ ಆರೋಗ್ಯ ಮತ್ತು ಇಳುವರಿಯನ್ನು ಖಾತ್ರಿಗೊಳಿಸಲು ಸಹಾಯ ಮಾಡುತ್ತದೆ. ಫೆಬ್ರವರಿ ೨೮ ರಂದು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ೧೬ನೇ ಕಂತನ್ನು ಮೋದಿ ಬಿಡುಗಡೆ ಮಾಡಿದರು.
ತೀರ್ಪು
ಬೆಳಗಾವಿಯಲ್ಲಿ ಮೋದಿಯವರ ಭಾಷಣದ ಈ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಮತ್ತು ಸಂದರ್ಭಕ್ಕೆ ಹೊರತಾಗಿ ಹಂಚಿಕೊಳ್ಳಲಾಗಿದೆ. ವೈರಲ್ ಕ್ಲಿಪ್ ಅನ್ನು ಬದಲಾಯಿಸಲಾಗಿಲ್ಲ ಮತ್ತು ಮೋದಿ ಅವರು ನಿಖರವಾಗಿ ಈ ಪದಗಳನ್ನು ಹೇಳಿದ್ದರೂ, ಅವರು ಕರ್ನಾಟಕದ ಜನರನ್ನು ಉಲ್ಲೇಖಿಸಿಲ್ಲ, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಿದ್ದಾರೆ. ಆದರಿಂದ ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.