ಮೂಲಕ: ರಜಿನಿ ಕೆ.ಜಿ
ಮಾರ್ಚ್ 9 2023
ದೇವರಕೊಂಡ ಹರೀಶ್ ಕುಮಾರ್ ಮತ್ತು ಅವರ ಸಂಗಾತಿ ಮನಿಷಾ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಇಬ್ಬರು ಮದುವೆಯಾಗಿರಲಿಲ್ಲ.
ಸಂದರ್ಭ
ಮಾರ್ಚ್ ೧, ೨೦೨೩ ರಂದು, ತೆಲಂಗಾಣದ ದೂಲಪಲ್ಲಿ ಗ್ರಾಮದಲ್ಲಿ ನಡೆದ ಹೇಳಲಾಗಿರುವ "ಮರ್ಯಾದಾ ಹತ್ಯೆ” ಪ್ರಕರಣದಲ್ಲಿ ದೇವರಕೊಂಡ ಹರೀಶ್ ಕುಮಾರ್ ಎಂಬ ಡಿಜೆ ಸೌಂಡ್ ಸಿಸ್ಟಂ ಆಪರೇಟರ್ ನನ್ನು ಹತ್ಯೆ ಮಾಡಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಮಾರ್ಚ್ ೬ ರ ವರದಿಯ ಪ್ರಕಾರ, ೧೧ ಆರೋಪಿಗಳಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಫೆಬ್ರವರಿ ೨೨ ರಂದು ಹರೀಶ್ ಮತ್ತು ಅವನ ಸಂಗಾತಿ ಮನಿಷಾ ಓಡಿಹೋಗಿದ್ದರು. ನಂತರ ಮನಿಶಾ ಅವರ ಸಹೋದರ ಬಿ ದೀನದಯಾಳ್ ಕುಮಾರ್ ಅವರನ್ನು ಕೊಲ್ಲಲು ಸಂಚು ರೂಪಿಸಿದರು ಮತ್ತು ದಾಳಿಯ ನೇತೃತ್ವ ವಹಿಸಿದ್ದರು ಎಂದು ವರದಿಯಲ್ಲಿ ಸೇರಿಸಲಾಗಿದೆ.
ಇದರ ಮಧ್ಯೆ, ಅನೇಕ ಸಾಮಾಜಿಕ ಮಾಧ್ಯಮ ಪೋಷ್ಟ್ಗಳು ವೈರಲ್ ಆಗಿದ್ದು, ಪ್ರಕರಣವು ಕೋಮುವಾದ ಕೋನವನ್ನು ಹೊಂದಿದೆ ಮತ್ತು ಸತ್ತವರು ಹಿಂದೂ ಆಗಿರುವುದರಿಂದ ಮತ್ತು ಅವರ ಪತ್ನಿ ಮುಸ್ಲಿಂ ಆಗಿರುವುದರಿಂದ ಇದು ಹಿಂದೂ-ಮುಸ್ಲಿಂ ದ್ವೇಷದಲ್ಲಿ ಒಂದಾಗಿದೆ ಎಂದು ತಪ್ಪಾಗಿ ಹೇಳುತ್ತವೆ. ಈ ನಿರೂಪಣೆಗಳು ಹೆಂಡತಿಯ ಕುಟುಂಬ ಸದಸ್ಯರು ಪತಿಯನ್ನು ಕೊಂದಿದ್ದಾರೆ ಎಂದು ಹೇಳುತ್ತದೆ. ಸುಮಾರು ೧೬೬,೦೦೦ ಅನುಯಾಯಿಗಳನ್ನು ಹೊಂದಿರುವ ಜೈಪುರ ಡೈಲಾಗ್ಸ್ ಎಂಬ ದೃಢೀಕೃತ ಟ್ವಿಟರ್ ಖಾತೆಯು ಇಂತಹ ಹೇಳಿಕೆಯನ್ನು ಪೋಷ್ಟ್ ಮಾಡಿದೆ. ನಿರ್ದಿಷ್ಟ ಟ್ವೀಟ್‌ನಲ್ಲಿ, "ಹಿಂದೂ ವ್ಯಕ್ತಿ ಡಿಜೆ ದೇವರಕೊಂಡ ಹರೀಶ್ (೨೮) ನನ್ನು, ಅಂತರ-ಧರ್ಮೀಯ ವಿವಾಹವಾದ ೧೦ ದಿನಗಳ ನಂತರ ತನ್ನ ಮುಸ್ಲಿಂ ಪತ್ನಿಯ ಕುಟುಂಬದ ಸದಸ್ಯರು ಬರ್ಬರವಾಗಿ ಇರಿದು ಕೊಂದರು. NYT ಟೈಮ್ಸ್ ಇದನ್ನು ಅಲ್ಪಸಂಖ್ಯಾತ ಸಮುದಾಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಹಿಂದೂಗಳ ಧಾರ್ಮಿಕ ಉಗ್ರವಾದ ಎಂದು ಕರೆಯುತ್ತದೆ” ಮತ್ತು ಇಲ್ಲಿಯವರೆಗೆ ೪೫,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ಈ ಹೇಳಿಕೆಯ ಇತರ ಆವೃತ್ತಿಗಳನ್ನು ಸಹ ನಾವು ನೋಡಿದ್ದೇವೆ. ಬಲಪಂಥೀಯ ಪ್ರಚಾರದ ಸುದ್ದಿವಾಹಿನಿ ಒಪ್ಇಂಡಿಯಾ (OpIndia) ಈ ಘಟನೆಯ ಕುರಿತು ಹಿಂದಿಯಲ್ಲಿ ವರದಿಯನ್ನು ಪ್ರಕಟಿಸಿತು, ಇದು ಭಾರೀ ಶೇರ್ಸ್ ಮತ್ತು ಲೈಕ್ಸ್ ಗಳಿಸಿದೆ. "ತೆಲಂಗಾಣದ ಹೈದರಾಬಾದ್‌ನಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕನನ್ನು ಹುಡುಗಿಯ ಸಹೋದರರು ಕೊಂದಿದ್ದಾರೆ!" ಎಂಬ ಶೀರ್ಷಿಕೆಯೊಂದಿಗೆ ಸನಾತನ ಪ್ರಭಾತ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಇಂಗ್ಲಿಷ್ ಲೇಖನವೂ ನಮಗೆ ಕಂಡುಬಂದಿದೆ.
ಆದರೆ, ಮೃತನು ಮತ್ತು ಆತನ ಸಂಗಾತಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಸುಳ್ಳು ಕೋಮು ದಳ್ಳುರಿ ಹಬ್ಬಿಸಲಾಗುತ್ತಿದೆ.
ವಾಸ್ತವವಾಗಿ
ಕೊಲೆ ಪ್ರಕರಣ ದಾಖಲಾಗಿರುವ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಗೌರಿ ಪ್ರಶಾಂತ್ ಅವರನ್ನು ಲಾಜಿಕಲಿ (Logically) ಸಂಪರ್ಕಿಸಿತು. ಎಸ್‌ಎಚ್‌ಒ, ಈ ಘಟನೆಯಲ್ಲಿ ಯಾವುದೇ ಕೋಮುವಾದದ ಕೋನವಿಲ್ಲ ಎಂದು ಸ್ಪಷ್ಟಪಡಿಸಿದರು. ಹಾಗೂ ಮೃತನು ಮತ್ತು ಆತನ ಸಂಗಾತಿ ಒಂದೇ ಸಮುದಾಯಕ್ಕೆ ಸೇರಿದವರು ಎಂದು ದೃಢಪಡಿಸಿದರು. ಅವರು "ಮುಸ್ಲಿಮರಲ್ಲ" ಮತ್ತು "ಮದುವೆಯಾಗಿರಲಿಲ್ಲ" ಎಂದು ಅವರು ಹೇಳಿದರು.
ಮಾರ್ಚ್ ೬, ೨೦೨೩ ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಹರೀಶ್ ಮತ್ತು ಮನೀಶಾ ಹಿಂದುಳಿದ ಸಮುದಾಯಕ್ಕೆ ಸೇರಿದವರು ಮತ್ತು ಹರೀಶ್ ದಲಿತ ಸಮುದಾಯಕ್ಕೆ ಸೇರಿದ್ದರು. ದಿ ನ್ಯೂಸ್ ಮಿನಿಟ್ ನ ವರದಿಯೂ ಇದನ್ನು ದೃಢಪಡಿಸಿದೆ. ಹರೀಶ್ ಮತ್ತು ಮನಿಷಾ ನಡುವಿನ ಸಂಬಂಧದಿಂದಾಗಿ “ಕುಟುಂಬದ ಪ್ರತಿಷ್ಠೆ ಹಾಳಾಗಿದೆ” ಎಂದು ಮಹಿಳೆಯ ಸಹೋದರ ದೀನದಯಾಳ್ ಭಾವಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ, ಪೊಲೀಸರ ಪ್ರಕಾರ, ಮತ್ತು ಇದನ್ನು "ಮರ್ಯಾದಾ ಹತ್ಯೆ" ಎಂದು ಕರೆದರು. ಮಾರ್ಚ್ ೪, ೨೦೨೩ ರಂದು ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು, ಮೃತನು ಮತ್ತು ಆತನ ಸಂಗಾತಿ ಮನಿಷಾ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಹೇಳಿದ್ದಾರೆ ಎಂದು ದೃಢಪಡಿಸಿದೆ.
ಲಾಜಿಕಲಿ (Logically) ಈ ಹಿಂದೆ ಭಾರತದಲ್ಲಿ ನಡೆದ ಘಟನೆಗಳಿಗೆ ಕೋಮುವಾದದ ಆಂಗಲ್ ನೀಡಲು ಪ್ರಯತ್ನಿಸಿದಾಗ ಇದೇ ರೀತಿಯ ಹೇಳಿಕೆಗಳನ್ನು ತಳ್ಳಿಹಾಕಿದೆ.
ತೀರ್ಪು
ಸ್ಥಳೀಯ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರು ಮೃತ ಕುಮಾರ್ ಮತ್ತು ಅವರ ಸಂಗಾತಿ ಮನಿಷಾ ಒಂದೇ ಧಾರ್ಮಿಕ ಸಮುದಾಯದಿಂದ ಬಂದವರು ಮತ್ತು ಮದುವೆಯಾಗಿಲ್ಲ ಎಂದು ಲಾಜಿಕಲಿಗೆ (Logically) ಖಚಿತಪಡಿಸಿದ್ದಾರೆ. ಹಿಂದೂ ಪುರುಷನನ್ನು ಆತನ ಮುಸ್ಲಿಂ ಪತ್ನಿಯ ಕುಟುಂಬ ಸದಸ್ಯರು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂಬ ಹೇಳಿಕೆಯನ್ನು ಹಿಂದೂ-ಮುಸ್ಲಿಂ ದ್ವೇಷದ ಘಟನೆ ಎಂದು ಹೇಳಲು ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.